ಸರಕಾರಿ ಬಂಗಲೆಯಲ್ಲಿ ವಾಸ್ತವ್ಯ ಮುಂದುವರಿಕೆ ; ಭೂಅಸ್ತಿ ನಿರ್ದೇಶನಾಲಯದ ಮೊರೆ ಹೋಗಲು ಮಹುವಾಗೆ ದಿಲ್ಲಿ ಹೈಕೋರ್ಟ್ ಸೂಚನೆ

ಮಹುವಾ ಮೊಯಿತ್ರಾ| Photo: PTI
ಹೊಸದಿಲ್ಲಿ : ಸರಕಾರಿ ಬಂಗಲೆಯಲ್ಲಿ ವಾಸ್ತವ್ಯವನ್ನು ಮುಂದುವರಿಸುವುದಕ್ಕೆ ಅನುಮತಿ ಪಡೆಯಲು ಎಸ್ಟೇಟ್ (ಭೂಅಸ್ತಿ) ನಿರ್ದೇಶನಾಲಯವನ್ನು ಸಂಪರ್ಕಿಸುವಂತೆ ಉಚ್ಛಾಟಿತ ಲೋಕಸಭಾ ಸದಸ್ಯೆ ಹಾಗೂ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರಿಗೆ ದಿಲ್ಲಿ ಹೈಕೋರ್ಟ್ ಗುರುವಾರ ತಿಳಿಸಿದೆ.
ಅಸಾಧಾರಣ ಸನ್ನಿವೇಶಗಳಲ್ಲಿ ನಿವಾಸಿಗೆ ನಿರ್ದಿಷ್ಟ ಕಾಲಾವಧಿಗಿಂತಲೂ ಅಧಿಕ ಸಮಯ ವಾಸ್ತವ್ಯ ಹೂಡುವುದಕ್ಕೆ ಅನುಮತಿಸಲು ಸಂಬಂಧಪಟ್ಟ ಇಲಾಖೆಗೆ ಕಾನೂನುಗಳು ಅಧಿಕಾರವನ್ನು ನೀಡಿವೆ ಎಂದು ನ್ಯಾಯಮೂರ್ತಿ ಸುಬ್ರಮಣಿಯನ್ ಪ್ರಸಾದ್ ತಿಳಿಸಿದ್ದಾರೆ.
‘‘ಭೂಅಸ್ತಿ ನಿರ್ದೇಶನಾಲಯದ ಮುಂದೆ ನಿಮ್ಮ ಅಹವಾಲನ್ನು ಸಲ್ಲಿಸಿರಿ ಹಾಗೂ ಅದು ಕಾನೂನು ಪ್ರಕಾರವೇ ಕ್ರಮವನ್ನು ಕೈಗೊಳ್ಳಲಿದೆ’’ ಎಂದು ನ್ಯಾಯಾಧೀಶರು ಮಹುವಾ ಅವರಿಗೆ ತಿಳಿಸಿದರು.
ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಯನ್ನು ಹಿಂಪಡೆದುಕೊಳ್ಳುವುದಕ್ಕೂ ನ್ಯಾಯಾಲಯ ಟಿಎಂಸಿ ನಾಯಕಿಗೆ ಅನುಮತಿ ನೀಡಿತು. ಮಹುವಾ ಅವರನ್ನು ಸರಕಾರಿ ಬಂಗಲೆಯಿಂದ ತೆರವುಗೊಳಿಸುವ ಮುನ್ನ ಅವರಿಗೆ ನೋಟಿಸ್ ನೀಡಬೇಕಾದುದನ್ನು ಕಾನೂನು ಕಡ್ಡಾಯಗೊಳಿಸಿದೆ ಎಂದು ನ್ಯಾಯಲಯವು ಅಭಿಪ್ರಾಯಿಸಿತು.
ತಾನು ಸರಕಾರಿ ಬಂಗಲೆಯನ್ನು ತೆರವುಗೊಳಿಸಬೇಕೆಂದು ಭೂಅಸ್ತಿ ನಿರ್ದೇಶನಾಲಯವು ಡಿಸೆಂಬರ್ 11ರಂದು ಜಾರಿಗೊಳಿಸಿದ ಆದೇಶವನ್ನು ಬದಿಗಿರಿಸಬೇಕು ಹಾಗೂ ಅದಕ್ಕೆ ಪರ್ಯಾಯವಾಗಿ 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವವರೆಗೆ ಸರಕಾರಿ ಬಂಗಲೆಯಲ್ಲಿಯೇ ವಾಸ್ತವ್ಯ ಮುಂದುವರಿಸಲು ತನಗೆ ಅನುಮತಿ ನೀಡಬೇಕೆಂದು ಮಹುವಾ ಅವರು ತನ್ನ ಅರ್ಜಿಯಲ್ಲಿ ದಿಲ್ಲಿ ಹೈಕೋರ್ಟಿಗೆ ಆಗ್ರಹಿಸಿದ್ದರು.
ಲೋಕಸಭೆಯಲ್ಲಿ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹೀರಾನಂದಾನಿಯಿಂದ ಹಣ ಹಾಗೂ ಉಡುಗೊರೆಗಳನ್ನು ಸ್ವೀಕರಿಸಿದ ಮತ್ತು ಅವರೊಂದಿಗೆ ಪಾರ್ಲಿಮಂಟ್ ವೆಬ್ಸೈಟ್ನ ಯೂಸರ್ ಐಡಿ ಹಾಗೂ ಪಾಸ್ವರ್ಡ್ ಐಡಿಯನ್ನು ಹಂಚಿಕೊಂಡಿದ್ದಕ್ಕಾಗಿ ಮಹುವಾ ಅವರು ತಪ್ಪಿತಸ್ಥರೆಂದು ಲೋಕಸಭೆಯ ನೈತಿಕ ಸಮಿತಿ ಯ ವರದಿ ಆರೋಪಿಸಿತ್ತು. ಲೋಕಸಭಾ ಸದಸ್ಯತ್ವದಿಂದ ಅವರ ಉಚ್ಛಾಟನೆಗೆ ಶಿಫಾರಸು ಮಾಡಿತ್ತು.
ನೈತಿಕ ಸಮಿತಿಯ ವರದಿಯನ್ನು ಅಂಗೀಕರಿಸಿದ ಲೋಕಸಭೆಯು ತನ್ನನ್ನು ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಮಹುವಾ ಅವರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.







