ಕಾಶ್ಮೀರದಲ್ಲಿನ ಕೆಟ್ಟ ಸ್ಥಿತಿಗೆ, ಪಹಲ್ಗಾಮ್ ದಾಳಿಗೆ ಸುಪ್ರೀಂ ಕೋರ್ಟ್ ಕೂಡ ಹೊಣೆ ಎಂದ ಆರೆಸ್ಸೆಸ್ ನಾಯಕ!
► ಸುಪ್ರೀಂ ಕೋರ್ಟ್ ವಿರುದ್ಧ ಆರೆಸ್ಸೆಸ್ ನಾಯಕ ನಂದಕುಮಾರ್ ನೇರ ಆರೋಪ ► ಆರೆಸ್ಸೆಸ್ ನಾಯಕ ಹೇಳಿದ್ದೇನು?

Photo : Mediaone
ಹೊಸದಿಲ್ಲಿ: ಮಧ್ಯ ಪ್ರದೇಶದ ಬಿಜೆಪಿ ಸಚಿವ ಸೇನಾಧಿಕಾರಿ ಸೋಫಿಯಾ ಖುರೇಶಿ ವಿರುದ್ಧ ಅವಹೇಳನಕಾರಿ ಮಾತನಾಡಿದ ಬೆನ್ನಿಗೇ ಆರೆಸ್ಸೆಸ್ ಹಿರಿಯ ನಾಯಕ ನೇರವಾಗಿ ಸುಪ್ರೀಂ ಕೋರ್ಟ್ ವಿರುದ್ಧವೇ ಆರೋಪ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ಇಡೀ ದೇಶ ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಆ ಬಳಿಕದ ಭಾರತ ಪಾಕ್ ನಡುವಿನ ಸಂಘರ್ಷದ ಕುರಿತು ಕಳವಳ ದಲ್ಲಿರುವಾಗಲೇ ಆರೆಸ್ಸೆಸ್ ಮುಖಂಡ ಅದಕ್ಕೆ ಸುಪ್ರೀಂ ಕೋರ್ಟ್ ಕಾರಣ ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿನ ಅತಿ ಕೆಟ್ಟ ಸ್ಥಿತಿ ಮತ್ತು ಪಹಲ್ಗಾಮ್ ದಾಳಿಗೆ ಸುಪ್ರೀಂ ಕೋರ್ಟ್ ಕೂಡ ಹೊಣೆಯಾಗಿದೆ ಎಂದು ಆರೆಸ್ಸೆಸ್ ಹಿರಿಯ ನಾಯಕ ಜೆ ನಂದಕುಮಾರ್ ಹೇಳಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಕೇರಳದ ತಿರುವನಂತಪುರಂನ ಅನಂತಪುರಿಯಲ್ಲಿ ನಡೆದ ಹಿಂದೂ ಮಹಾಸಮ್ಮೆಳನದಲ್ಲಿ ಮಾತನಾಡುತ್ತ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಚುನಾವಣೆಗಳನ್ನು ನಡೆಸಿತು. ಅದು ಅಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುವ ಸರ್ಕಾರ ಬರಲು ಕಾರಣವಾಯಿತು ಎಂದು ನಂದಕುಮಾರ್ ಹೇಳಿದ್ದಾರೆ. ಇದೇ ವೇಳೆ ನಂದಕುಮಾರ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿರುದ್ಧವೂ ಮಾತಾಡಿದ್ದಾರೆ.
ಅವರು ಇನ್ನೂ ಅಂತಹ ಸ್ಥಾನದಲ್ಲಿಯೇ ಇದ್ದಾರೆ. ಅಧಿಕಾರದಲ್ಲಿ ಕುಳಿತಿರುವ ಅವರು, ತಮ್ಮ ಮಕ್ಕಳು, ಅಳಿಯಂದಿರು, ಸಂಬಂಧಿಕರು ಮತ್ತು ಮನೆಯ ಸಿಬ್ಬಂದಿಯನ್ನು ಕೂಡ ನ್ಯಾಯಾಧೀಶರನ್ನಾಗಿ ನೇಮಿಸಲು ಅನುಕೂಲವಾಗುವಂತೆ ಸಂಪೂರ್ಣ ವ್ಯವಸ್ಥೆಯನ್ನು ರೂಪಿಸುವ ಮಟ್ಟಕ್ಕೆ ಹೋಗಿದ್ದಾರೆ ಎಂದು ನಂದಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸುಪ್ರೀಂ ಕೋರ್ಟ್ ಕಾರಣ ಎಂದು ಆಪಾದಿಸಿರುವ ಅವರ ಹೇಳಿಕೆಯ ಮುಖ್ಯ ಭಾಗ ಹೀಗಿದೆ:
ನಾವು ಯಾಕೆ ವಿಫಲರಾಗುತ್ತಿದ್ದೇವೆಂದರೆ, ನಾವು ಕೆಲ ವಿಷಯಗಳನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ. ಸತ್ಯವನ್ನು ಸ್ಪಷ್ಟವಾಗಿ ಹೇಳುವುದರಲ್ಲಿ ಯಾವ ಅಪಾಯವಿದೆ? ಎಂದು ಪ್ರಶ್ನಿಸಿದ್ದಾರೆ.
ವಾಸ್ತವವಾಗಿ, ಈ ಪಹಲ್ಗಾಮ್ ದಾಳಿಯ ಹಿಂದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡುತ್ತಿರುವುದರಲ್ಲಿ ಸುಪ್ರೀಂ ಕೋರ್ಟ್ ಹೊಣೆಗಾರಿಕೆಯೂ ಇದೆಯಲ್ಲವೆ ಎಂದು ಅವರು ಪ್ರಶ್ನಿಸಿದ್ದಾರೆ.
ಅದನ್ನು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಸುಪ್ರೀಂ ಕೋರ್ಟ್ ನನ್ನನ್ನು ಶಿಕ್ಷಿಸಿದರೂ ನಾನದರ ಬಗ್ಗೆ ಚಿಂತಿಸುವುದಿಲ್ಲ ಎಂದಿದ್ದಾರೆ. 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರ ಅಸಂವಿಧಾನಿಕವಾಗಿರಲಿಲ್ಲ; ಅದನ್ನು ಸಂವಿಧಾನದ ಪ್ರಕಾರ ತೆಗೆದುಕೊಳ್ಳಲಾಗಿದೆ. ಚುನಾಯಿತ ಸಂಸತ್ ಸದಸ್ಯರು ಮತ ಚಲಾಯಿಸುವ ಮೂಲಕ ಅದನ್ನು ಅಂಗೀಕರಿಸಿದರು. ಅದನ್ನು ಅಂಗೀಕರಿಸುವ ನಿರ್ಧಾರ ತೆಗೆದುಕೊಂಡ ಸರ್ಕಾರಕ್ಕೇ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು. ಕಳೆದ ಸೆಪ್ಟೆಂಬರ್ ಮೊದಲು ಚುನಾವಣೆಗಳನ್ನು ನಡೆಸಬೇಕು ಎಂದು ಹೇಳಿತು ಎಂದು ನಂದಕುಮಾರ್ ಪ್ರಸ್ತಾಪಿಸಿದರು.
ಅವರು ಕೊಲಿಜಿಯಂನ ಚಕ್ರವರ್ತಿಗಳಂತೆ ಕುಳಿತಿದ್ದಾರೆ. ಅವರು ಇನ್ನೂ ಅಂತಹ ಸ್ಥಾನದಲ್ಲಿಯೇ ಇದ್ದಾರೆ. ಅಧಿಕಾರದಲ್ಲಿ ಕುಳಿತಿರುವ ಅವರು, ತಮ್ಮ ಮಕ್ಕಳು, ಅಳಿಯಂದಿರು, ಸಂಬಂಧಿಕರು ಮತ್ತು ಮನೆಯ ಸಿಬ್ಬಂದಿಯನ್ನು ಕೂಡ ನ್ಯಾಯಾಧೀಶರನ್ನಾಗಿ ನೇಮಿಸಲು ಅನುಕೂಲವಾಗುವಂತೆ ಸಂಪೂರ್ಣ ವ್ಯವಸ್ಥೆಯನ್ನು ರೂಪಿಸುವ ಮಟ್ಟಕ್ಕೆ ಹೋಗಿದ್ದಾರೆ ಎಂದು ನಂದಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.ಅರಮನೆಯಂತಹ ನಿವಾಸಗಳು ಬೇರೆಯವರಿಗೆ ಹೋಗದಂತೆ ನೋಡಿಕೊಳ್ಳಲು, ಅವರ ಸ್ವಂತ ಮಕ್ಕಳು ನ್ಯಾಯಾಧೀಶರಾಗಲು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ತೀರ್ಪುಗಳನ್ನು ಅಲ್ಲಿಂದಲೇ ಬರೆಯಬಹುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆಯೋ ಇಲ್ಲವೋ ಎಂದು ಯಾರು ನಿಜವಾಗಿಯೂ ಅರ್ಥಮಾಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲಿ ಕೆಲಸ ಮಾಡಿವವರು ದೆಹಲಿಯ ಸುಪ್ರೀಂ ಕೋರ್ಟ್ನ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತವರೆ ಅಥವಾ ಮಿಲಿಟರಿ ಸಿಬ್ಬಂದಿಯೇ? ಇದು ಸರಳ ಪ್ರಶ್ನೆ, ಅದನ್ನು ಪರಿಗಣಿಸದೆ ಆದೇಶಗಳನ್ನು ಹೊರಡಿಸಲಾಗುತ್ತಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಪ್ರಜಾಸತ್ತಾತ್ಮಕ ಜವಾಬ್ದಾರಿಯ ಪ್ರಜ್ಞೆ ಹೊಂದಿದೆ. ಆ ಪ್ರಜಾಸತ್ತಾತ್ಮಕ ಪ್ರಜ್ಞೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಅಲ್ಲಿ ಸಂದರ್ಭಗಳು ಇನ್ನೂ ಸೂಕ್ತವಾಗಿಲ್ಲ ಎಂದು ಮನವರಿಕೆ ಮಾಡಲು ಪ್ರಯತ್ನಿಸಿತು. ಘರ್ಷಣೆ ತಪ್ಪಿಸಲು ಕಡೆಗೆ ಒಪ್ಪಿಕೊಳ್ಳಬೇಕಾಯಿತು ಎಂದಿದ್ದಾರೆ.
ಜಮ್ಮು ಕಾಶ್ಮೀರ ಇನ್ನೂ ಸಂಪೂರ್ಣ ಸ್ಥಿರತೆಯನ್ನು ಕಂಡಿರದ ಸಮಯದಲ್ಲಿ, ಭಯೋತ್ಪಾದನೆಯನ್ನು ಬೆಂಬಲಿಸುವ ಸರ್ಕಾರ ಅಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ನಂದಕುಮಾರ್ ಆರೋಪಿಸಿದ್ದಾರೆ. ನಂದ ಕುಮಾರ್ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ
ನಂದ ಕುಮಾರ್ ವಿರುದ್ಧ ತಕ್ಷಣ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಕೇಳಿ ಬಂದಿದೆ. ಸಿಪಿಎಂ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರು ನಂದ ಕುಮಾರ್ ಹಾಗೂ ಮಧ್ಯ ಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುಪ್ರೀಂ ಕೋರ್ಟ್ ವಿರುದ್ಧ ಬಿಜೆಪಿ, ಸಂಘ ಪರಿವಾರದ ಮುಖಂಡರು ಮಾತಾಡುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚಿಗೆ ವಕ್ಫ್ ತಿದ್ದುಪಡಿ ಕಾಯ್ದೆ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆಗೆ ಕಿಡಿ ಕಾರಿದ್ದ ಬಿಜೆಪಿ ಸಂಸದ ನಿಷಿಕಾಂತ್ ದುಬೆ ದೇಶದಲ್ಲಿ ಆಂತರಿಕ ಯುದ್ಧಕ್ಕೆ ಸುಪ್ರೀಂ ಕೋರ್ಟ್ ಕಾರಣವಾಗುತ್ತದೆ ಎಂದು ಹೇಳಿದ್ದರು. ಹೀಗೆ ಮಾಡುವುದಿದ್ದರೆ ಸಂಸತ್ತನ್ನು ಬಂದ್ ಮಾಡಬೇಕೆ ಎಂದೂ ಕೇಳಿದ್ದರು.
ಈಗ ಆರೆಸ್ಸೆಸ್ ಮುಖಂಡ ನೇರವಾಗಿಯೇ ಸುಪ್ರೀಂ ಕೋರ್ಟ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಭಯೋತ್ಪಾದಕ ದಾಳಿಗೂ ಸುಪ್ರೀಂ ಕೋರ್ಟ್ ಗೂ ನಂಟು ಕಲ್ಪಿಸಿದ್ದಾರೆ. ಇದಕ್ಕೆ ಸುಪ್ರೀಂ ಕೋರ್ಟ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಕುತೂಹಲ ಮೂಡಿದೆ.







