“ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ಕೊಡುವವರೆಗೆ ಮೀಸಲಾತಿ ಮುಂದುವರಿಯಬೇಕು” : ವಿವಾದಕ್ಕೆ ಕಾರಣವಾದ ಐಎಎಸ್ ಅಧಿಕಾರಿಯ ಹೇಳಿಕೆ

ಹಿರಿಯ ಐಎಎಸ್ ಅಧಿಕಾರಿ ಸಂತೋಷ್ ವರ್ಮಾ (Photo credit: newindianexpress.com)
ಭೋಪಾಲ್ : ಮಧ್ಯಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ನೌಕರರ ಸಂಘ AJAKS ಪ್ರಾಂತೀಯ ಅಧ್ಯಕ್ಷ, ಹಿರಿಯ ಐಎಎಸ್ ಅಧಿಕಾರಿ ಸಂತೋಷ್ ವರ್ಮಾ ರವಿವಾರ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ.
"ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ಕೊಡುವವರೆಗೆ ಅಥವಾ ಅವನ ಜೊತೆ ಸಂಬಂಧ ಬೆಳೆಸುವವರೆಗೆ ಮೀಸಲಾತಿ ಮುಂದುವರಿಯಬೇಕು" ಎಂದು ಭೋಪಾಲ್ನ ಅಂಬೇಡ್ಕರ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಮಾ ಹೇಳಿದ್ದರು.
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಬ್ರಾಹ್ಮಣ ಸಂಘಟನೆಗಳು ವರ್ಮಾ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ಸಂತೋಷ್ ವರ್ಮಾ ಅವರ ಹೇಳಿಕೆ ಅಸಭ್ಯ, ಜಾತಿವಾದಿ ಮತ್ತು ಬ್ರಾಹ್ಮಣ ಹೆಣ್ಣುಮಕ್ಕಳನ್ನು ಅವಮಾನಿಸುವ ಹೇಳಿಕೆಯಾಗಿದೆ ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅಖಿಲ ಭಾರತ ಬ್ರಾಹ್ಮಣ ಸಮಾಜದ ರಾಜ್ಯಾಧ್ಯಕ್ಷ ಪುಷ್ಪೇಂದ್ರ ಮಿಶ್ರಾ, ಐಎಎಸ್ ಅಧಿಕಾರಿಯ ಹೇಳಿಕೆ ಅಸಭ್ಯ, ಆಕ್ಷೇಪಾರ್ಹ ಮತ್ತು ಬ್ರಾಹ್ಮಣ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಅವರ ವಿರುದ್ಧ ಶೀಘ್ರದಲ್ಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಲ್ಲವಾದಲ್ಲಿ ಬ್ರಾಹ್ಮಣ ಸಮಾಜ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದ್ದಾರೆ.
ಮಹಿಳೆಯರ ಘನತೆ ಮತ್ತು ಕಲ್ಯಾಣದ ಗುರಿಯನ್ನು ಹೊಂದಿರುವ ಲಾಡ್ಲಿ ಲಕ್ಷ್ಮಿ, ಲಾಡ್ಲಿ ಬೆಹ್ನಾ ಮತ್ತು ಬೇಟಿ ಬಚಾವೊ, ಬೇಟಿ ಪಡಾವೊ ಮುಂತಾದ ಯೋಜನೆಗಳನ್ನು ಸರಕಾರ ಪ್ರಚಾರ ಮಾಡುತ್ತಿರುವಾಗ ಈ ಹೇಳಿಕೆಗಳು ಅಖಿಲ ಭಾರತ ಸೇವಾ ನಡವಳಿಕೆ ನಿಯಮಗಳನ್ನು ಉಲ್ಲಂಘಿಸುತ್ತವೆ ಎಂದು ಪುಷ್ಪೇಂದ್ರ ಮಿಶ್ರಾ ಹೇಳಿದರು.







