ಟಿವಿ ನೇರಪ್ರಸಾರದಲ್ಲಿ ಬಿಜೆಪಿ ವಕ್ತಾರನಿಂದ ಕಾಂಗ್ರೆಸ್ ನಾಯಕನ ತಾಯಿಯ ನಿಂದನೆ; ವ್ಯಾಪಕ ಆಕ್ರೋಶ

Screengrab: X / @zoo_bear
ಹೊಸದಿಲ್ಲಿ: ಸುದ್ದಿವಾಹಿನಿಯೊಂದರಲ್ಲಿ ಚರ್ಚೆಯ ನೇರ ಪ್ರಸಾರದಲ್ಲಿ ಬಿಜೆಪಿ ವಕ್ತಾರ ಪ್ರೇಮ ಶುಕ್ಲಾ ಅವರು ಕಾಂಗ್ರೆಸ್ ವಕ್ತಾರ ಸುರೇಂದ್ರ ರಜಪೂತ್ ಅವರ ತಾಯಿಯ ವಿರುದ್ಧ ತೀವ್ರ ಆಕ್ಷೇಪಾರ್ಹ ನಿಂದನಾತ್ಮಕ ಪದವನ್ನು ಬಳಸಿದ ಬಳಿಕ ರಾಜಕೀಯ ವಿವಾದವು ಭುಗಿಲೆದ್ದಿದೆ. ಶುಕ್ಲಾರಿಂದ ಅವಾಚ್ಯ ಪದ ಬಳಕೆಗೆ ರಾಜಕೀಯ ನಾಯಕರು ಮತ್ತು ನಾಗರಿಕ ಸಮಾಜ ಗುಂಪುಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯು ಕೇಂದ್ರಬಿಂದುವಾಗಿದ್ದ ಚರ್ಚೆಯು ಶುಕ್ಲಾ ರಜಪೂತ್ ಅವರ ತಾಯಿಯನ್ನು ಉಲ್ಲೇಖಿಸುವಾಗ ಹಿಂದಿಯ ಆಕ್ಷೇಪಾರ್ಹ ಪದವನ್ನು ಬಳಸಿದಾಗ ಅನಿರೀಕ್ಷಿತ ತಿರುವು ಪಡೆದುಕೊಂಡಿತ್ತು. ಉಭಯ ನಾಯಕರ ನಡುವಿನ ವಾಗ್ವಾದವು ಸಾಮಾಜಿಕ ಮಾಧ್ಯಮಗಳಲ್ಲಿ ತ್ವರಿತವಾಗಿ ವೈರಲ್ ಆಗಿದ್ದು, ಪ್ರತಿಪಕ್ಷ ನಾಯಕರು ಮತ್ತು ಸಾರ್ವಜನಿಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಟಿವಿ ಚರ್ಚೆ ಸಂದರ್ಭದಲ್ಲಿ ಶುಕ್ಲಾರ ವರ್ತನೆಯನ್ನು ಖಂಡಿಸಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರು, ಬಿಜೆಪಿ ವಕ್ತಾರರು ದೂರದರ್ಶನದಲ್ಲಿ ಸಭ್ಯತೆಯ ಗೆರೆಯನ್ನು ದಾಟುವುದು ಮಾಮೂಲಾಗಿದೆ. ಆದರೆ ಇಂದು ರಜಪೂತ್ ಅವರ ದಿವಂಗತ ತಾಯಿಯ ಕುರಿತು ತೀವ್ರ ಆಕ್ಷೇಪಾರ್ಹ ಪದವನ್ನು ಬಳಸುವ ಮೂಲಕ ನಾಗರಿಕತೆ ಮತ್ತು ಗೌರವದ ಎಲ್ಲ ಮಿತಿಯನ್ನೂ ಅತಿಕ್ರಮಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ಲಾರ ಹದ್ದು ಮೀರಿದ ವರ್ತನೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿರುವ ರಜಪೂತ್ ಅವರು, "ಅದು ಕಾಂಗ್ರೆಸಿಗ, ಬಿಜೆಪಿಗ, ಸ್ವತಃ ನಾನು, ಪ್ರೇಮ ಶುಕ್ಲಾ ಅಥವಾ ಭಾರತ ಮಾತೆಯೇ ಆಗಿರಲಿ, ತಾಯಿ ಪ್ರತಿಯೊಬ್ಬರಿಗೂ ತಾಯಿಯೇ ಆಗಿರುತ್ತಾಳೆ ಎಂದಿದ್ದಾರೆ. ನನ್ನ ದಿವಂಗತ ತಾಯಿಯನ್ನು ನಿಂದಿಸುವ ಮೂಲಕ ಬಿಜೆಪಿಯು ತನ್ನ ಸೈದ್ಧಾಂತಿಕ ದಿವಾಳಿತನವನ್ನು ಬಹಿರಂಗಗೊಳಿಸಿದೆ" ಎಂದು ಹೇಳಿದ್ದಾರೆ.
ಚರ್ಚೆಯ ಸಂದರ್ಭದಲ್ಲಿ ಶುಕ್ಲಾರ ಬಳಿ ತಾರ್ಕಿಕ ವಾದಗಳು ಖಾಲಿಯಾದಾಗ ಅವರು ಮೊದಲು ರಾಹುಲ್ ಗಾಂಧಿಯವರನ್ನುನಿಂದಿಸಲು ಆರಂಭಿಸಿದ್ದರು. ಬಿಜೆಪಿ ನಾಯಕರೋರ್ವರನ್ನು ಉದ್ದೇಶಿಸಿ ತಾನೂ ಅದೇ ಭಾಷೆಯಲ್ಲಿ ಉತ್ತರಿಸಿದಾಗ ಕೆಳಮಟ್ಟಕ್ಕಿಳಿದ ಶುಕ್ಲಾ ನನ್ನನ್ನು ನಿಂದಿಸುವ ಮೂಲಕ ತನ್ನ ದಿವಂಗತ ತಾಯಿಯನ್ನು ಕೆಟ್ಟದಾಗಿ ಅವಮಾನಿಸಿದರು ಎಂದು ರಜಪೂತ್ ಆರೋಪಿಸಿದ್ದಾರೆ.
ನಿಂದನೀಯ ಹೇಳಿಕೆಗಳನ್ನು ನೀಡುವುದು ಮಹಿಳೆಯರನ್ನು ಗೌರವಿಸುವ ಕ್ರಮವೇ ಅಥವಾ ಅವಮಾನಿಸುವ ಕ್ರಮವೇ ಎನ್ನುವುದನ್ನು ಬಿಜೆಪಿ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿರುವ ರಜಪೂತ್, ಅತ್ತ ಭೋಪಾಲದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರನ್ನು ಗೌರವಿಸುವ ಬಗ್ಗೆ ಭಾರೀ ಭಾಷಣವನ್ನು ಬಿಗಿಯುತ್ತಿದ್ದಾಗ ಅವರ ಪಕ್ಷದ ವಕ್ತಾರರು ನೇರ ಟಿವಿ ಪ್ರಸಾರದಲ್ಲಿ ತಾಯಿಯ ಬಗ್ಗೆ ನಿಂದನಾತ್ಮಕಭಾಷೆಯನ್ನು ಸಾರ್ವಜನಿಕವಾಗಿ ಬಳಸಿದ್ದರ ವಿರೋಧಾಭಾಸವನ್ನು ಎತ್ತಿ ತೋರಿಸಿದ್ದಾರೆ.
ಘಟನೆಯನ್ನು ಬಲವಾಗಿ ಖಂಡಿಸಿರುವ ಎಸ್ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು, ಬಿಜೆಪಿ ನಾಯಕರು ಸಾಮಾನ್ಯ ನಾಗರಿಕರೊಂದಿಗೆ ಖಾಸಗಿಯಾಗಿ ಹೇಗೆ ವರ್ತಿಸಬಹುದು ಎನ್ನುವುದನ್ನು ಇಂತಹ ಭಾಷೆಯು ಬಹಿರಂಗಗೊಳಿಸಿದೆ ಎಂದು ಹೇಳಿದ್ದಾರೆ.







