ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣ | ಈಡಿ ದೋಷಾರೋಪ ಪಟ್ಟಿಯಲ್ಲಿ ಕೇರಳ ಸಿಪಿಎಂ ಹೆಸರು

ಸಾಂದರ್ಭಿಕ ಚಿತ್ರ | PC : PTI
ತಿರುವನಂತಪುರ: ಜಾರಿ ನಿರ್ದೇಶನಾಲಯ(ಈಡಿ)ವು ಸಿಪಿಎಂ ನಿಯಂತ್ರಣದಲ್ಲಿರುವ ಸಹಕಾರಿ ಬ್ಯಾಂಕಿನಲ್ಲಿ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪ ಪಟ್ಟಿಯಲ್ಲಿ ಪಕ್ಷವನ್ನು ಹೆಸರಿಸಿದೆ.
ಲೋಕಸಭಾ ಸಂಸದ ಕೆ.ರಾಧಾಕೃಷ್ಣನ್, ರಾಜ್ಯದ ಮಾಜಿ ಸಚಿವ ಎ.ಸಿ.ಮೊಯಿದೀನ್ ಮತ್ತು ಪಕ್ಷದ ಮಾಜಿ ತ್ರಿಶೂರು ಜಿಲ್ಲಾ ಕಾರ್ಯದರ್ಶಿ ಎಂ.ಎಂ.ವರ್ಗೀಸ್ ಸೇರಿದಂತೆ ಕೇರಳ ಸಿಪಿಎಮ್ ನ ಎಂಟು ನಾಯಕರನ್ನೂ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಇದು ಈಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ರಾಜಕೀಯ ಪಕ್ಷವೊಂದನ್ನು ಆರೋಪಿಯನ್ನಾಗಿ ಹೆಸರಿಸಿರುವ ಎರಡನೇ ಪ್ರಕರಣವಾಗಿದೆ. ಈಡಿ ಕಳೆದ ವರ್ಷದ ಮೇ ತಿಂಗಳಲ್ಲಿ ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಆರೋಪಿಯನ್ನಾಗಿ ಹೆಸರಿಸಿತ್ತು.
ಕೇರಳದ ಕರವನ್ನೂರ್ ಸಹಕಾರಿ ಬ್ಯಾಂಕಿನ ಸುಮಾರು 300 ಕೋ.ರೂ.ಗಳನ್ನು ಪಕ್ಷದ ಪದಾಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕ್ರೈಂ ಬ್ರ್ಯಾಂಚ್ ಆರೋಪಿಸಿದ ಬಳಿಕ ಈಡಿ ಸಿಪಿಎಂ ನಾಯಕರ ವಿರುದ್ಧದ ಪ್ರಕರಣದ ತನಿಖೆಯನ್ನು ಆರಂಭಿಸಿತ್ತು.
ರಾಧಾಕೃಷ್ಣನ್,ಮೊಯಿದೀನ್ ಮತ್ತು ವರ್ಗೀಸ್ ಅವರು ತ್ರಿಶೂರ್ ಸಿಪಿಎಂ ಜಿಲ್ಲಾ ಕಾರ್ಯದರ್ಶಿಗಳಾಗಿದ್ದ ಅವಧಿಯಲ್ಲಿ ಇತರ ಆರೋಪಿಗಳು ಬ್ಯಾಂಕಿನಿಂದ ಅಕ್ರಮ ಸಾಲಗಳನ್ನು ಪಡೆದುಕೊಳ್ಳಲು ನೆರವಾಗಿದ್ದರು ಮತ್ತು ಈ ಸಾಲಗಳ ಒಂದು ಭಾಗವನ್ನು ಪಕ್ಷದ ನಿಧಿಗೆ ವರ್ಗಾಯಿಸಲಾಗಿತ್ತು ಎಂದು ಈಡಿ ಆರೋಪಿಸಿದೆ.
ದೋಷಾರೋಪ ಪಟ್ಟಿಯು ಪ್ರಕರಣದಲ್ಲಿ ಮಾಫಿ ಸಾಕ್ಷಿದಾರನಾಗಿರುವ ಬ್ಯಾಂಕ್ ಉದ್ಯೋಗಿ ಬಿಜು ಹೇಳಿಕೆಯನ್ನು ಒಳಗೊಂಡಿದೆ. ಸಿಪಿಎಂ ಜಿಲ್ಲಾ ಸಮಿತಿಯ ಸದಸ್ಯರು ಅಕ್ರಮ ಸಾಲಗಳನ್ನು ಮಂಜೂರು ಮಾಡುವಂತೆ ಬ್ಯಾಂಕ್ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು ಮತ್ತು ಸಾಲಗಾರರಿಂದ ಸಾಲದ ಒಂದು ಭಾಗವನ್ನು ಪಕ್ಷದ ನಿಧಿಗೆ ಕೊಡುಗೆಯಾಗಿ ಪಡೆದುಕೊಂಡಿದ್ದರು ಎಂದು ಬಿಜು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆನ್ನಲಾಗಿದೆ.
ಈಡಿ ಕ್ರಮಗಳು ರಾಜಕೀಯ ಪ್ರೇರಿತ ಪಿತೂರಿಯ ಭಾಗವಾಗಿವೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಆರೋಪಿಸಿದ್ದಾರೆ.
ಕೇರಳದ ಜನರು ಈ ಪಿತೂರಿಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದ ಅವರು, ಸಿಪಿಎಂ ಇದನ್ನು ರಾಜಕೀಯವಾಗಿ ಮತ್ತು ಕಾನೂನುಬದ್ಧವಾಗಿ ಎದುರಿಸಲಿದೆ ಎಂದರು.
ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವವರ ವಿರುದ್ಧ ಪಕ್ಷವು ಕಠಿಣ ಕ್ರಮವನ್ನು ತೆಗೆದುಕೊಂಡಿದೆ ಎಂದೂ ಅವರು ಹೇಳಿದರು.







