ರಾಜಕೀಯ ಪಕ್ಷಗಳಿಗೆ ದೇಣಿಗೆಗಳು: ಕಾರ್ಪೊರೇಟ್ ಸಂಸ್ಥೆಗಳಿಗಿಂತ ಹೆಚ್ಚಿನ ತೆರಿಗೆ ಲಾಭಗಳನ್ನು ಗಳಿಸಿದ ವೈಯಕ್ತಿಕ ತೆರಿಗೆದಾರರು

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕದ ಬಳಿಕ ವೈಯಕ್ತಿಕ ತೆರಿಗೆದಾರರು ರಾಜಕೀಯ ಪಕ್ಷಗಳಿಗೆ ದೇಣಿಗೆಗಳ ಮೇಲೆ ಗಳಿಸಿದ ತೆರಿಗೆ ಲಾಭಗಳಲ್ಲಿ ಏರಿಕೆಯಾಗಿದೆ. ವಾಸ್ತವದಲ್ಲಿ ಲೋಕಸಭಾ ಚುನಾವಣೆಗೆ ಮುನ್ನ,2023-24ರವರೆಗಿನ ಎರಡು ವಿತ್ತವರ್ಷಗಳಲ್ಲಿ ವೈಯಕ್ತಿಕ ತೆರಿಗೆದಾರರು ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆಗಳ ಮೇಲೆ ಕಾರ್ಪೊರೇಟ್ ತೆರಿಗೆದಾರರಿಗಿಂತ ಹೆಚ್ಚಿನ ತೆರಿಗೆ ಲಾಭಗಳನ್ನು ಗಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
2025-26ನೇ ಸಾಲಿನ ಮುಂಗಡಪತ್ರದಲ್ಲಿ ಕೇಂದ್ರಿಯ ತೆರಿಗೆ ವ್ಯವಸ್ಥೆಯಡಿ ಆದಾಯದ ಮೇಲೆ ತೆರಿಗೆ ಪ್ರೋತ್ಸಾಹಕಗಳ ಪರಿಣಾಮ ಕುರಿತು ಹೇಳಿಕೆಯು,ಆದಾಯ ತೆರಿಗೆ (ಐಟಿ) ಕಾಯ್ದೆ ಸೆಕ್ಷನ್ 80ಜಿಜಿಸಿಯಡಿ ವಿತ್ತವರ್ಷ 2023ರಲ್ಲಿ ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆಗಳ ಮೇಲೆ ವೈಯಕ್ತಿಕ/ಹಿಂದು ಅವಿಭಕ್ತ ಕುಟುಂಬ ತೆರಿಗೆದಾರರು 2275.85 ಕೋಟಿ ರೂ.ಗಳ ತೆರಿಗೆ ಕಡಿತಗಳ ಲಾಭಗಳನ್ನು ಗಳಿಸಿದ್ದಾರೆ ಎನ್ನುವುದನ್ನು ತೋರಿಸಿದೆ. ವಿತ್ತವರ್ಷ 2024ರಲ್ಲಿ ಈ ಸಂಖ್ಯೆಯು ಶೇ.12.36ರಷ್ಟು ಏರಿಕೆಯೊಂದಿಗೆ 2,557.15 ಕೋಟಿ ರೂ.ಗೆ ತಲುಪಲಿದೆ ಎಂದು ಅದು ಅಂದಾಜಿಸಿದೆ.
ಕಾರ್ಪೊರೇಟ್ ತೆರಿಗೆದಾರರಿಗೆ ಹೋಲಿಸಿದರೆ ವೈಯಕ್ತಿಕ ತೆರಿಗೆದಾರರು ಪಡೆದುಕೊಂಡಿರುವ ತೆರಿಗೆ ಕಡಿತಗಳ ಲಾಭ ಹೆಚ್ಚಿನ ಪ್ರಮಾಣದಲ್ಲಿದೆ. ವಿತ್ತವರ್ಷ 2023 ಮತ್ತು ವಿತ್ತವರ್ಷ 2024ರಲ್ಲಿ ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆಗಳ ಮೇಲೆ ಕಾರ್ಪೊರೇಟ್ ತೆರಿಗೆದಾರರು ಅನುಕ್ರಮವಾಗಿ 514.40 ಕೋಟಿ ರೂ. ಮತ್ತು 577.98 ಕೋಟಿ ರೂ.(ಅಂದಾಜು) ತೆರಿಗೆ ಕಡಿತ ಲಾಭಗಳನ್ನು ಪಡೆದಿದ್ದಾರೆ. ವಿತ್ತವರ್ಷ 2018ರಲ್ಲಿಯೂ ವೈಯಕ್ತಿಕ ತೆರಿಗೆದಾರರು ತೆರಿಗೆ ಕಡಿತಗಳಿಂದ ಗಳಿಸಿದ ಆದಾಯ(169.56 ಕೋಟಿ ರೂ.)ವು ಕಾರ್ಪೊರೇಟ್ ತೆರಿಗೆದಾರರು ಗಳಿಸಿದ್ದ ಆದಾಯ(133.36 ಕೋ.ರೂ.)ಕ್ಕಿಂತ ಹೆಚ್ಚಿತ್ತು.
ಹಿಂದಿನ ವರ್ಷದ ಬಜೆಟ್ ದಾಖಲೆಗಳ ವಿಶ್ಲೇಷಣೆಯು,ವರ್ಷಗಳಿಂದಲೂ ಆದಾಯ ತೆರಿಗೆದಾರರು ರಾಜಕೀಯ ಪಕ್ಷಗಳಿಗೆ ದೇಣಿಗೆಗಳ ಮೇಲೆ ಪಡೆಯುತ್ತಿರುವ ತೆರಿಗೆ ಲಾಭಗಳು ಹೆಚ್ಚುತ್ತಲೇ ಇವೆ ಎನ್ನುವುದನ್ನು ತೋರಿಸಿದೆ. ಆದರೂ,ಕೋವಿಡ್ ಸಾಂಕ್ರಾಮಿಕದ ಬಳಿಕ ಈ ಪ್ರವೃತ್ತಿಯಲ್ಲಿ ಏರಿಕೆ ಕಂಡು ಬಂದಿದ್ದು,ವಿತ್ತವರ್ಷ 2020ರಲ್ಲಿ 544.53 ಕೋಟಿ ರೂ.ಗಳಿದ್ದ ತೆರಿಗೆ ಕಡಿತ ಲಾಭಗಳು ವಿತ್ತವರ್ಷ 2021ರಲ್ಲಿ 740.03 ಕೋಟಿ ರೂ.ಮತ್ತು ವಿತ್ತವರ್ಷ 2022ರಲ್ಲಿ 1650.86 ಕೋಟಿ ರೂ.ಗೆ ಏರಿಕೆಯಾಗಿದ್ದವು.
ವಿತ್ತವರ್ಷ 2023ರಲ್ಲಿ ರಾಜಕಿಯ ಪಕ್ಷಗಳಿಗೆ ದೇಣಿಗೆಗಳ ಮೇಲೆ ಕಾರ್ಪೊರೇಟ್ಗಳು,ಸಂಸ್ಥೆಗಳು ಮತ್ತು ವ್ಯಕ್ತಿಗಳು ಪಡೆದುಕೊಂಡಿರುವ ತೆರಿಗೆ ಕಡಿತ ಲಾಭಗಳ ಮೊತ್ತ 2,905.96 ಕೋ.ರೂ.ಗಳಾಗಿದ್ದು,ವಿತ್ತವರ್ಷ 2024ರಲ್ಲಿ 3,265.14 ಕೋ.ರೂ.ಗೆ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ಆದರೂ ಇದು ವಿತ್ತವರ್ಷ 2022ರಲ್ಲಿಯ 3,516.47 ಕೋಟಿ ರೂ.ಗಿಂತ ಕಡಿಮೆಯಾಗಿದೆ. ಈ ಮೂರೂ ವರ್ಗಗಳಿಗೆ ಸೇರಿದ ತೆರಿಗೆದಾರರು ವಿತ್ತವರ್ಷ 2015ರಿಂದ ಹತ್ತು ವರ್ಗಳ ಅವಧಿಯಲ್ಲಿ ಗಳಿಸಿದ ತೆರಿಗೆ ರಿಯಾಯಿತಿಗಳು 14,473.75 ಕೋಟಿ ರೂ.ಗಳಾಗಲಿವೆ ಎಂದು ಅಂದಾಜಿಸಲಾಗಿದೆ.