ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ಆರೋಪ: ಫ್ರೆಂಚ್ ನ್ಯಾಯಾಧೀಶರ ತನಿಖೆಗೆ ಅಡ್ಡಗೋಡೆಯಾದ ಮೋದಿ ಸರಕಾರ; ಮೀಡಿಯಾಪಾರ್ಟ್ ವರದಿ

ರಫೇಲ್ ಯುದ್ಧವಿಮಾನ | Photo: PTI
ಹೊಸದಿಲ್ಲಿ: 2016ರಲ್ಲಿ 7.8 ಶತಕೋಟಿ ಯುರೋಗಳಿಗೆ 36 ಡಸಾಲ್ಟ್ ನಿರ್ಮಿತ ರಫೇಲ್ ಯುದ್ಧವಿಮಾನಗಳ ಮಾರಾಟದಲ್ಲಿ ಭ್ರಷ್ಟಾಚಾರ ಆರೋಪ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಭಾರತದ ನೆರವನ್ನು ಕೋರಿರುವ ಫ್ರೆಂಚ್ ನ್ಯಾಯಾಧೀಶರೊಂದಿಗೆ ಸಹಕರಿಸಲು ನರೇಂದ್ರ ಮೋದಿ ಸರಕಾರವು ನಿರಾಕರಿಸುತ್ತಿದೆ ಎಂದು ಪ್ಯಾರಿಸ್ ಮೂಲದ ತನಿಖಾ ವೆಬ್ಸೈಟ್ ಮೀಡಿಯಾ ಪಾರ್ಟ್ ಪ್ರಕಟಿಸಿರುವ ನೂತನ ವರದಿಯು ತಿಳಿಸಿದೆ.
ಭಾರತದಲ್ಲಿ ಫ್ರೆಂಚ್ ರಾಯಭಾರಿ ಇಮ್ಯಾನುವೆಲ್ ಲಿನೈನ್ ಅವರು 2023, ಜು.25ರ ರಾಜತಾಂತ್ರಿಕ ಟಿಪ್ಪಣಿಯೊಂದರಲ್ಲಿ ಭಾರತದೊಂದಿಗಿನ ಅಪರಾಧ ಪ್ರಕರಣಗಳ ತನಿಖೆಯಲ್ಲಿನ ಸವಾಲುಗಳನ್ನು ಎತ್ತಿ ತೋರಿಸಿದ್ದಾರೆ.
ಮೀಡಿಯಾಪಾರ್ಟ್ ಮಾಹಿತಿಯ ಪ್ರಕಾರ, ಶಂಕಿತ ಭ್ರಷ್ಟಾಚಾರ, ವಶೀಲಿಬಾಜಿ ಮತ್ತು ಪಕ್ಷಪಾತ ಕುರಿತು ಕ್ರಿಮಿನಲ್ ತನಿಖೆಯನ್ನು ನಡೆಸುತ್ತಿರುವ ಇಬ್ಬರು ಫ್ರೆಂಚ್ ನ್ಯಾಯಾಧೀಶರು, ನವೆಂಬರ್ 2022ರಲ್ಲಿ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಸಹಕಾರಕ್ಕಾಗಿ ಮನವಿಯನ್ನು ಪುರಸ್ಕರಿಸಲು ಭಾರತ ಸರಕಾರವು ನಿರಾಕರಿಸಿದೆ.
ಸಚಿವಾಲಯವು ಎಲ್ಲ ಸಂವಹನಗಳನ್ನು ಅಂತ್ಯಗೊಳಿಸುವ ಮುನ್ನ ಎಂಟು ತಿಂಗಳುಗಳ ಕಾಲ ಭಾರತದಲ್ಲಿಯ ಫ್ರೆಂಚ್ ರಾಯಭಾರಿ ಕಚೇರಿಯನ್ನು ಗೊಂದಲದಲ್ಲಿರಿಸಿತ್ತು ಎಂದು ವರದಿಯು ಹೇಳಿದೆ. ಹೀಗಾಗಿ ಆಗ ಭಾರತಕ್ಕೆ ಫ್ರೆಂಚ್ ರಾಯಭಾರಿಯಾಗಿದ್ದ ಲಿನೈನ್ ಈ ವಿಷಯ ಕುರಿತು ರಾಜತಾಂತ್ರಿಕ ಟಿಪ್ಪಣಿಯನ್ನು ಬರೆಯುವುದು ಅನಿವಾರ್ಯ ಎಂದು ಭಾವಿಸಿದ್ದರು. ಲಿನೈನ್ ಈಗ ಬ್ರಝಿಲ್ ನಲ್ಲಿ ಫ್ರೆಂಚ್ ರಾಯಭಾರಿಯಾಗಿದ್ದಾರೆ.
ಲಿನೈನ್ ತನ್ನ ಟಿಪ್ಪಣಿಯಲ್ಲಿ ಫ್ರೆಂಚ್ ಸರಕಾರವು ಆ.11 ಮತ್ತು 12ರಂದು ಕೋಲ್ಕತಾದಲ್ಲಿ ನಡೆಯಲಿದ್ದ ಜಿ20 ಭ್ರಷ್ಟಾಚಾರ ವಿರೋಧ ಶೃಂಗಸಭೆಯನ್ನು ಬಳಸಿಕೊಂಡು ಕೆಲವು ಪ್ರಕರಣಗಳನ್ನು ಮುಂದುವರಿಸಲು ಪ್ರಯತ್ನಿಸಿತ್ತು ಎಂದೂ ಉಲ್ಲೇಖಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರೋನ್ ಮತ್ತು ಅವರ ಪೂರ್ವಾಧಿಕಾರಿ ಎಲಿಸಿ ಫ್ರಾಂಕೋಯಿಸ್ ಹೊಲಾಂಡ್ ಅವರನ್ನು ಸಿಲುಕಿಸಬಹುದಾದ ಅತ್ಯಂತ ಸೂಕ್ಷ್ಮವಾದ ತನಿಖೆಯನ್ನು ವಿಳಂಬಗೊಳಿಸುವಲ್ಲಿ ಫ್ರೆಂಚ್ ಮತ್ತು ಭಾರತೀಯ ಸರಕಾರಗಳು ಹೇಗೆ ಒಂದಾಗಿವೆ ಎನ್ನುವುದನ್ನು ಮೀಡಿಯಾಪಾರ್ಟ್ ಈ ಹಿಂದೆ ವರದಿ ಮಾಡಿತ್ತು.
ಅಕ್ಟೋಬರ್ 2018ರಲ್ಲಿ ಫ್ರೆಂಚ್ ತನಿಖಾ ನ್ಯಾಯಾಧೀಶರು ಡಸಾಲ್ಟ್ ಮತ್ತು ಸುಶೇನ್ ಗುಪ್ತಾಗೆ ಸಂಬಂಧಿಸಿದ ನ್ಯಾಯಾಂಗ ದಾಖಲೆಗಳನ್ನು ತಮಗೆ ಕಳುಹಿಸುವಂತೆ ಭಾರತೀಯ ಅಧಿಕಾರಿಗಳನ್ನು ಕೋರಿದ್ದರು. ಪ್ರಭಾವಿ ರಕ್ಷಣಾ ಉದ್ಯಮಿಯಾಗಿದ್ದ ಗುಪ್ತಾನನ್ನು ಆಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಜಾರಿ ನಿರ್ದೇಶನಾಲಯವು ಬಂಧಿಸಿತ್ತು.
ರಫೇಲ್ ವ್ಯವಹಾರದಲ್ಲಿಯೂ ಏಜೆಂಟ್ ಆಗಿದ್ದ ಗುಪ್ತಾ ಮಿಲಿಯಗಟ್ಟಲೆ ಕಮಿಷನ್ ಸ್ವೀಕರಿಸಿದ್ದಾನೆ ಎಂದು ಮೀಡಿಯಾ ಪಾರ್ಟ್ ಎಪ್ರಿಲ್ 2021ರಲ್ಲಿ ವರದಿ ಮಾಡಿತ್ತು.
ಗುಪ್ತಾನ ಕಂಪನಿಗಳಲ್ಲಿ ಮತ್ತು ಡಸಾಲ್ಟ್ ರಿಲಯನ್ಸ್ ಎರೋಸ್ಪೇಸ್ ಲಿ.(ಡಿಆರ್ಎಎಲ್)ನ ಕೇಂದ್ರ ಕಚೇರಿಯಲ್ಲಿ ತಮ್ಮ ಉಪಸ್ಥಿತಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುವಂತೆ ಫ್ರೆಂಚ್ ನ್ಯಾಯಾಧೀಶರು ಕೇಳಿಕೊಂಡಿದ್ದರು. ಆದರೆ ಅದನ್ನು ನಿರಾಕರಿಸಲಾಗಿತ್ತು. ಫ್ರೆಂಚ್ ವರ್ಗೀಕೃತ ದಾಖಲೆಗಳನ್ನೂ ಅವರಿಗೆ ಒದಗಿಸಲಾಗಿರಲಿಲ್ಲ.
ಡಿಆರ್ಎಎಲ್ ಡಸಾಲ್ಟ್ ಮತ್ತು ಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್ ಜಂಟಿಯಾಗಿ ಸ್ಥಾಪಿಸಿರುವ ಕಂಪನಿಯಾಗಿದೆ.
ಗಮನಾರ್ಹ ಬೆಳವಣಿಗೆಯೊಂದರಲ್ಲಿ, ಅಂತಿಮ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಮೋದಿ ಸರಕಾರವು ರಫೇಲ್ ಒಪ್ಪಂದದಲ್ಲಿಯ ಎಲ್ಲ ಭ್ರಷ್ಟಾಚಾರ ವಿರೋಧಿ ನಿಬಂಧನೆಗಳನ್ನು ತೆಗೆದುಹಾಕಿತ್ತು. ಇದನ್ನು ಭಾರತೀಯ ಸಂಧಾನಕಾರರ ತಂಡವು ಆಕ್ಷೇಪಿಸಿದ್ದರೂ ಸರಕಾರವು ಅದನ್ನು ಕಡೆಗಣಿಸಿತ್ತು ಎಂದು ಫೆಬ್ರವರಿ 2019ರಲ್ಲಿ ಮಾಧ್ಯಮಗಳು ವರದಿ ಮಾಡಿದ್ದವು.
ರಫೇಲ್ ಒಪ್ಪಂದಕ್ಕೆ ಸಹಿ ಬಿದ್ದ ಎರಡೇ ವಾರಗಳಲ್ಲಿ 2016ರ ಅ.3ರಂದು ಡಸಾಲ್ಟ್ ಮತ್ತು ರಿಲಯನ್ಸ್ ಜಂಟಿಯಾಗಿ ಡಿಆರ್ಎಎಲ್ ಸ್ಥಾಪನೆಯನ್ನು ಪ್ರಕಟಿಸಿದ್ದವು. ಅಂಬಾನಿ ಫ್ರಾನ್ಸ್ ನಿಂದ ತೆರಿಗೆ ರಿಯಾಯಿತಿಯನ್ನು ಪಡೆದುಕೊಂಡಿದ್ದನ್ನು ಮೀಡಿಯಾ ಪಾರ್ಟ್ ಈ ಹಿಂದೆ ವರದಿ ಮಾಡಿತ್ತು.
ತನ್ನ ಇತ್ತೀಚಿನ ವರದಿಯಲ್ಲಿ ಮೀಡಿಯಾಪಾರ್ಟ್, ನ್ಯಾಯಾಂಗ ಮನವಿಗೆ ಸಂಬಂಧಿಸಿದಂತೆ ಭಾರತೀಯ ಅಧಿಕಾರಿಗಳಿಂದ ಸಹಕಾರದಲ್ಲಿ ವಿಳಂಬ ಕುರಿತು ದಿಲ್ಲಿಯಲ್ಲಿನ ಫ್ರೆಂಚ್ ರಾಯಭಾರಿಗಳು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದೆ.
ಮ್ಯಾಕ್ರೋನ್ ಆಣತಿಯ ಮೇರೆಗೆ ಅವರ ಪ್ರತಿನಿಧಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಫ್ರೆಂಚ್-ಭಾರತೀಯ ಸಂಬಂಧಗಳ ಉಸ್ತುವಾರಿಯ ಜೊತೆ ಗೃಹಸಚಿವಾಲಯದ ಅಂತರರಾಷ್ಟ್ರೀಯ ವ್ಯವಹಾರಗಳ ನಿರ್ದೇಶಕರನ್ನು ಭೇಟಿಯಾಗಿದ್ದರು ಮತ್ತು ಫ್ರೆಂಚ್ ನ್ಯಾಯಾಧೀಶರ ಮನವಿಗೆ ಸಾಧ್ಯವಾದಷ್ಟು ಶೀಘ್ರ ಸ್ಪಂದಿಸುವುದಾಗಿ ಅವರಿಗೆ ಭರವಸೆ ನೀಡಲಾಗಿತ್ತು. ಆದಾಗ್ಯೂ ಫ್ರೆಂಚ್ ನ್ಯಾಯಾಧೀಶರ ಮನವಿಯನ್ನು ಇನ್ನೂ ಈಡೇರಿಸಲಾಗಿಲ್ಲ.
ವರದಿಯ ಪ್ರಕಾರ ಈ ಪ್ರಕರಣವು, ಮೋದಿ ಸರಕಾರದ ನಡವಳಿಕೆಯು ರಫೇಲ್ ವಿಮಾನಗಳ ಮಾರಾಟ ಕುರಿತು ಫ್ರೆಂಚ್ ನ್ಯಾಯಾಂಗ ತನಿಖೆಯು ಅಂತಿಮ ನಿರ್ಣಯಕ್ಕೆ ತಲುಪದಂತೆ ನೋಡಿಕೊಳ್ಳುವ ಪ್ಯಾರಿಸ್ನ ಹುನ್ನಾರಕ್ಕೆ ಪೂರಕವಾಗಿದೆ ಎನ್ನುವುದನ್ನು ನಿರ್ದಿಷ್ಟವಾಗಿ ತೋರಿಸುತ್ತಿದೆ. ಪರಿಣಾಮವಾಗಿ ತನಿಖಾ ನ್ಯಾಯಾಧಿಶರು ಪ್ರಮುಖ ತೊಡಕನ್ನು ಎದುರಿಸುತ್ತಿದ್ದಾರೆ. ಫ್ರೆಂಚ್ ವರ್ಗೀಕೃತ ದಾಖಲೆಗಳು ಮತ್ತು ರಹಸ್ಯಕಮಿಷನ್ ಪಾವತಿಯನ್ನು ಸಾಬೀತುಗೊಳಿಸಬಲ್ಲ ಭಾರತೀಯ ನ್ಯಾಯಾಂಗ ದಾಖಲೆಗಳು ಅವರಿಗೆ ದೊರೆಯುತ್ತಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ಫ್ರಾನ್ಸ್ ನಲ್ಲಿಯೂ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಮೀಡಿಯಾ ಪಾರ್ಟ್ ವರದಿ ಮಾಡಿದೆ.







