ಉತ್ತರ ಪ್ರದೇಶ | ಕೆಮ್ಮಿನ ಸಿರಪ್ ಅಕ್ರಮ ಮಾರಾಟ; 12 ಔಷಧ ಅಂಗಡಿಗಳ ಮಾಲಕರ ವಿರುದ್ಧ ಪ್ರಕರಣ ದಾಖಲು

Photo Credit : Freepik
ಜೌನ್ಪುರ, ನ. 23: ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಕೊಡೈನ್ ಇರುವ ಕೆಮ್ಮಿನ ಸಿರಪ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ 12 ಔಷಧ ಅಂಗಡಿಗಳ ಮಾಲಕರು ಹಾಗೂ ಇತರ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಔಷದ ನಿರೀಕ್ಷಕ ರಜತ್ ಕುಮಾರ್ ಪಾಂಡೆ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಆಯುಷ್ ಶ್ರೀವಾತ್ಸವ ಹೇಳಿದ್ದಾರೆ.
ಆರೋಪಿಗಳಲ್ಲಿ ಕೆಮ್ಮಿನ ಸಿರಪ್ ಅಕ್ರಮ ಮಾರಾಟ ಜಾಲದ ರೂವಾರಿಯಾಗಿರುವ ಶುಭಂ ಜೈಸ್ವಾಲ್ ಹಾಗೂ ಆತನ ತಂದೆ ಭೋಲಾ ಪ್ರಸಾದ್ ಕೂಡ ಸೇರಿದ್ದಾರೆ. ಅವರ ವಿರುದ್ಧ ವಂಚನೆ ಹಾಗೂ ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಲಾಗಿದೆ.
ಔಷದ ಇಲಾಖೆಯ ತನಿಖೆಯಲ್ಲಿ ಸುಮಾರು 57 ಕೋಟಿ ರೂ. ಮೌಲ್ಯದ 37 ಲಕ್ಷಕ್ಕೂ ಅಧಿಕ ಬಾಟಲಿ ಕೊಡೈನ್ ಸಿರಪ್ ಅನ್ನು 12ಕ್ಕಿಂತಲೂ ಹೆಚ್ಚು ಔಷಧ ಅಂಗಡಿಗಳು ನಕಲಿ ದಾಖಲೆಗಳ ಮೂಲಕ ಮಾರಾಟ ಮಾಡಿರುವುದು ಕಂಡು ಬಂದಿದೆ.
ಗಾಝಿಯಾದಬಾದ್ ನಲ್ಲಿ ಸಿರಪ್ ಸಾಗಿಸುತ್ತಿದ್ದ ಟ್ರಕ್ ಅನ್ನು ವಶಪಡಿಸಿಕೊಂಡ ಬಳಿಕ ಈ ಜಾಲ ಬೆಳಕಿಗೆ ಬಂದಿದೆ.





