ಕೆಮ್ಮು ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟ ಹಿನ್ನೆಲೆ : ಕಾಲ್ಡ್ರಿಫ್ ಸಿರಪ್ ನಿಷೇಧಿಸಿದ ತಮಿಳುನಾಡು, ಮಧ್ಯಪ್ರದೇಶ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಅ. 4: ಕಾಲ್ಡ್ರಿಫ್ ಕೆಮ್ಮು ಸಿರಪ್ ಸೇವಿಸಿ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಪರಾಸಿಯ ತಾಲೂಕಿನಲ್ಲಿ 9 ಮಕ್ಕಳು ಮೃತಪಟ್ಟಿದ್ದಾರೆ. ಇದರ ಬೆನ್ನಿಗೇ, ತಮಿಳುನಾಡು ಮತ್ತು ಮಧ್ಯಪ್ರದೇಶ ಈ ಕಂಪೆನಿಯ ಸಿರಪನ್ನು ನಿಷೇಧಿಸಿವೆ.
ಛಿಂದ್ವಾರ ಜಿಲ್ಲೆಯಲ್ಲಿ ಐದು ವರ್ಷಕ್ಕಿಂತ ಕೆಳಗಿನ 80 ಶೇಕಡ ಮಕ್ಕಳಿಗೆ ಕಾಲ್ಡ್ರಿಫ್ ಸಿರಪ್ ನೀಡಲಾಗಿತ್ತು. ಈ ಪೈಕಿ 9 ಮಕ್ಕಳು ಮೂತ್ರಪಿಂಡ ವೈಫಲ್ಯದಿಂದಾಗಿ ಸೆಪ್ಟಂಬರ್ 4ರಿಂದ ಮೃತಪಟ್ಟಿದ್ದಾರೆ. ರಾಜಸ್ಥಾನದಲ್ಲಿ ಇಬ್ಬರು ಮಕ್ಕಳು ಈ ಸಿರಪ್ ಸೇವಿಸಿದ ಬಳಿಕ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಮಧ್ಯಪ್ರದೇಶ ಸರಕಾರವು ಶನಿವಾರ ಕಾಲ್ಡ್ರಿಫ್ ಕೆಮ್ಮು ಸಿರಪ್ನ ಶನಿವಾರ ನಿಷೇಧಿಸಿದೆ. ಸಿರಪ್ನಲ್ಲಿ ವಿಷಕಾರಿ ಡೈಎತಿಲೀನ್ ಗ್ಲೈಕಾಲ್ ಅತಿ ಹೆಚ್ಚಿನ ಮಟ್ಟದಲ್ಲಿ ಪತ್ತೆಯಾದ ಬಳಿಕ ರಾಜ್ಯ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.
‘‘ಛಿಂದ್ವಾರ ಜಿಲ್ಲೆಯಲ್ಲಿ ಕಾಲ್ಡ್ರಿಫ್ ಕೆಮ್ಮು ಸಿರಪ್ ಸೇವಿಸಿದ ಬಳಿಕ ಒಂಭತ್ತು ಮಕ್ಕಳು ಸಾವಿಗೀಡಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಈ ಸಿರಪ್ನ ಮಾರಾಟವನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ. ಈ ವಿಷಕಾರಿ ಸಿರಪ್ ತಯಾರಿಸುವ ಕಂಪೆನಿಯ ಇತರ ಉತ್ಪನ್ನಗಳ ಮಾರಾಟಕ್ಕೂ ನಿಷೇಧ ಹೇರುವ ಬಗ್ಗೆ ಪರಿಶೀಲಿಸಲಾಗುತ್ತಿದೆ’’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಶನಿವಾರ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಈ ಸಿರಪ್ ತಯಾರಿಸುವ ಕಾರ್ಖಾನೆ ತಮಿಳುನಾಡಿನ ಕಾಂಚೀಪುರಮ್ನಲ್ಲಿದೆ. ಛಿಂದ್ವಾರದಲ್ಲಿ ನಡೆದ ಘಟನೆಯ ಬಳಿಕ, ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರಕಾರವು ತಮಿಳುನಾಡು ಸರಕಾರಕ್ಕೆ ಪತ್ರ ಬರೆದಿದೆ ಎಂಬುದಾಗಿಯೂ ಯಾದವ್ ಹೇಳಿದರು.
‘‘ತನಿಖಾ ವರದಿಯನ್ನು ಇಂದು ಬೆಳಗ್ಗೆ ಸ್ವೀಕರಿಸಲಾಗಿದೆ. ವರದಿಯ ಆಧಾರದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇದರ ಬಗ್ಗೆ ತನಿಖೆ ನಡೆಸಲು ರಾಜ್ಯ ಮಟ್ಟದಲ್ಲಿ ತಂಡವೊಂದನ್ನು ರಚಿಸಲಾಗಿದೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡಲಾಗುವುದಿಲ್ಲ’’ ಎಂದು ಅವರು ಹೇಳಿದರು.
ಅಕ್ಟೋಬರ್ ಒಂದರಂದು, ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಮಧ್ಯಪ್ರದೇಶ ಔಷಧ ನಿಯಂತ್ರಣ ಪ್ರಾಧಿಕಾರವು ತಮಿಳುನಾಡು ಔಷಧ ನಿಯಂತ್ರಣ ಇಲಾಖೆಗೆ ಪತ್ರ ಬರೆದಿತ್ತು. ತಮಿಳುನಾಡು ಈ ವಿಷಯದ ಬಗ್ಗೆ ತನಿಖೆಗಾಗಿ ಅದೇ ದಿನ ತಂಡವೊಂದನ್ನು ರಚಿಸಿತ್ತು.
ತನಿಖೆಯ ವೇಳೆ, ಕಾಂಚೀಪುರಮ್ ಜಿಲ್ಲೆಯಲ್ಲಿರುವ ಔಷಧ ತಯಾರಿಕಾ ಕಾರ್ಖಾನೆಯಲ್ಲಿ 1945ರ ಔಷಧ ನಿಯಮಾವಳಿಗಳ ಪೈಕಿ ಹಲವು ನಿಯಮಗಳ ಉಲ್ಲಂಘನೆಗಳು ನಡೆದಿರುವುದನ್ನು ತಂಡವು ಪತ್ತೆಹಚ್ಚಿದೆ.
► ಕಳಪೆ ದರ್ಜೆಯ ಕಚ್ಚಾವಸ್ತು ಬಳಕೆ?
ಕಾಲ್ಡ್ರಿಫ್ ಸಿರಪ್ನ ವಿವಾದಾಸ್ಪದ ಬ್ಯಾಚ್ನ ಔಷಧವನ್ನು ಔಷಧ ತಯಾರಿಕೆಯಲ್ಲಿ ಬಳಸದಿರುವ ಕಳಪೆ ದರ್ಜೆಯ ಪ್ರೊಪಿಲೀನ್ ಗ್ಲೈಕಾಲ್ನ್ನು ಬಳಸಲಾಗಿತ್ತು ಎನ್ನುವುದನ್ನು ತನಿಖೆಯು ಕಂಡುಕೊಂಡಿದೆ. ಇದು ಡೈಎತಿಲೀನ್ ಗ್ಲೈಕಾಲ್ ಮತ್ತು ಎತಿಲೀನ್ ಗ್ಲೈಕಾಲ್ನೊಂದಿಗೆ ಬೆರೆತು ವಿಷಕಾರಿಯಾಗಿ ಪರಿವರ್ತನೆಯಾಗಿರಬಹುದು ಎಂದು ಹೇಳಲಾಗಿದೆ.
ಎಸ್ಆರ್-13 ಬ್ಯಾಚ್ ನಂಬರ್ನ ಕಾಲ್ಡ್ರಿಫ್ ಸಿರಪ್ ದಾಸ್ತಾನನ್ನು ತುರ್ತು ಪರಿಶೀಲನೆಗಾಗಿ ವಶಪಡಿಸಿಕೊಳ್ಳಲಾಗಿದೆ ಮತ್ತು ವಿತರಣೆಗಾಗಿ ಇಡಲಾಗಿದ್ದ ಇತರ ದಾಸ್ತಾನನ್ನು ಮುಟ್ಟುಗೋಲು ಹಾಕಲಾಗಿದೆ.
ಸಿರಪ್ನ ಮಾದರಿಗಳನ್ನು ತುರ್ತು ವಿಶ್ಲೇಷಣೆಗಾಗಿ ಚೆನ್ನೈನಲ್ಲಿರುವ ಸರಕಾರಿ ಔಷಧ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
► ಅಪಾಯಕಾರಿ ಮಟ್ಟದಲ್ಲಿ ರಾಸಾಯನಿಕ ಬೆರಕೆ
‘‘ಕಾಲ್ಡ್ರಿಫ್ ಕೆಮ್ಮು ಸಿರಪ್ನಲ್ಲಿ ಡೈಎತಿಲೀನ್ ಗ್ಲೈಕಾಲ್ನ ಮಟ್ಟವು 48 ಶೇಕಡ ಆಗಿತ್ತು. ಆದರೆ, ಅನುಮೋದಿತ ಮಟ್ಟ ಕೇವಲ 0.1 ಶೇಕಡ. ಸಿರಪ್ನಲ್ಲಿ ಇಷ್ಟು ಪ್ರಮಾಣದ ಡೈಎತಿಲೀನ್ ಗ್ಲೈಕಾಲ್ ಇರುವುದು ಅತ್ಯಂತ ಅಪಾಯಕಾರಿಯಾಗಿದೆ’’ ಎಂದು ಮಧ್ಯಪ್ರದೇಶದ ಔಷಧ ನಿಯಂತ್ರಕ ಡಿ.ಕೆ. ಮೌರ್ಯ ಹೇಳಿದ್ದಾರೆ.
‘‘ಈವರೆಗೆ, ಈ ಸಿರಪನ್ನು ಮಧ್ಯಪ್ರದೇಶದ ಛಿಂದ್ವಾರ ಪ್ರದೇಶಕ್ಕೆ ಮಾತ್ರ ಪೂರೈಸಲಾಗಿರುವಂತೆ ಕಂಡುಬರುತ್ತಿದೆ. ಇತರ ಜಿಲ್ಲೆಗಳಲ್ಲಿ ಅದು ಕಂಡುಬಂದಿಲ್ಲ. ಅದರ ಮೇಲೆ ನಿಗಾ ಇಡುವಂತೆ ಎಲ್ಲಾ ಔಷಧ ತಪಾಸಕರಿಗೆ ನಾವು ಸೂಚನೆ ನೀಡಿದ್ದೇವೆ’’ ಎಂದು ಅವರು ಹೇಳಿದರು.
ಇನ್ನೊಂದು ಶಂಕಾಸ್ಪದ ಸಿರಪ್ ‘ನೆಕ್ಸಾ ಡಿ5’ ಕುರಿತ ವರದಿಗಾಗಿ ಕಾಯಲಾಗುತ್ತಿದೆ ಎಂದು ಅವರು ತಿಳಿಸಿದರು.
► ತಮಿಳುನಾಡಿನಲ್ಲೂ ನಿಷೇಧ
ಇದಕ್ಕೂ ಮೊದಲು, ತಮಿಳುನಾಡು ಸರಕಾರವು ಕಾಲ್ಡ್ರಿಫ್ ಕೆಮ್ಮು ಸಿರಪ್ ಅನ್ನು ನಿಷೇಧಿಸಿದೆ. ಪರೀಕ್ಷೆಗೆ ಕಳುಹಿಸಲಾದ ಮಾದರಿಗಳಲ್ಲಿ ವಿಷಕಾರಿ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅದು ಈ ಕ್ರಮ ತೆಗೆದುಕೊಂಡಿದೆ.
ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ರಾಜ್ಯದ ಕಾಂಚೀಪುರಮ್ನಲ್ಲಿರುವ ಔಷಧ ತಯಾರಿಕಾ ಕಾರ್ಖಾನೆಯಿಂದ ವಿವರ ಕೋರಿದ್ದಾರೆ ಮತ್ತು ಔಷಧ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.
ಕಾಲ್ಡ್ರಿಫ್ ಕೆಮ್ಮು ಸಿರಪ್ ನಿಷೇಧಿಸಿದ ಬೆನ್ನಿಗೇ, ಅದನ್ನು ಮಾರುಕಟ್ಟೆಯಿಂದ ಹೊರತೆಗೆಯುವಂತೆ ಆದೇಶ ನೀಡಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಈ ಸಿರಪ್ ಸೇವಿಸಿದ 11 ಮಕ್ಕಳು ಮೃತಪಟ್ಟ ಬಳಿಕ ತಮಿಳುನಾಡು ಸರಕಾರ ಈ ಕಾರ್ಯಾಚರಣೆ ನಡೆಸಿದೆ.
ತಮಿಳುನಾಡಿನಲ್ಲಿ ಈ ಸಿರಪ್ ನಿಷೇಧವು ಅಕ್ಟೋಬರ್ ಒಂದರಿಂದ ಜಾರಿಗೆ ಬಂದಿದೆ. ‘‘ಮುಂದಿನ ಆದೇಶದವರೆಗೆ, ಔಷಧ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಈ ಸಿರಪ್ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಪುದುಚೇರಿಗೆ ಪೂರೈಸಲಾಗಿತ್ತು ಎಂದು ಅವರು ಹೇಳಿದರು.
ಈ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ 9 ಮಕ್ಕಳು ಪ್ರಾಣ ಕಳೆದುಕೊಂಡರೆ. ರಾಜಸ್ಥಾನದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
► 6 ರಾಜ್ಯಗಳ ಔಷಧ ತಯಾರಿಕಾ ಘಟಕಗಳಲ್ಲಿ ಕೇಂದ್ರೀಯ ಸಂಸ್ಥೆಯಿಂದ ತಪಾಸಣೆ
ಆರು ರಾಜ್ಯಗಳಲ್ಲಿರುವ, ಕೆಮ್ಮು ಸಿರಪ್ಗಳು ಮತ್ತು ಆ್ಯಂಟಿಬಯಾಟಿಕ್ಸ್ ಸೇರಿದಂತೆ 19 ಔಷಧಗಳ ತಯಾರಿಕಾ ಘಟಕಗಳಲ್ಲಿ ತಪಾಸಣೆ ನಡೆಸಲು ಕೇಂದ್ರೀಯ ಔಷಧ ನಿಯಂತ್ರಕ ಸಂಸ್ಥೆ ಸಿಡಿಎಸ್ಸಿಒ ನಿರ್ಧರಿಸಿದೆ. ಮಧ್ಯಪ್ರದೇಶದಲ್ಲಿ ಕಾಲ್ಡ್ರಿಫ್ ಕೆಮ್ಮು ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟಿರುವ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ಔಷಧಗಳ ಗುಣಮಟ್ಟ ಹದಗೆಡಲು ಕಾರಣವಾಗಿರುವ ಲೋಪಗಳನ್ನು ಗುರುತಿಸುವ ಉದ್ದೇಶದ ತಪಾಸಣೆಗಳನ್ನು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ) ಅಕ್ಟೋಬರ್ 3ರಂದು ಆರಂಭಿಸಿದೆ. ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ತಡೆಯವು ವಿಧಾನಗಳನ್ನೂ ಅದು ಸೂಚಿಸಲಿದೆ.
ಅದೇ ವೇಳೆ, ಮಧ್ಯಪ್ರದೇಶದ ಛಿಂದ್ವಾರದಲ್ಲಿ ಮಕ್ಕಳು ಮೃತಪಟ್ಟ ಬಗ್ಗೆ ಕಾರಣಗಳನ್ನು ಪತ್ತೆಹಚ್ಚಲು ರಾಷ್ಟ್ರೀಯ ವೈರಾಲಜಿ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ಸಿಡಿಎಸ್ಸಿಒ ಮತ್ತು ಎಐಐಎಮ್ಎಸ್-ನಾಗಪುರ ಮುಂತಾದ ಸಂಸ್ಥೆಗಳ ಪರಿಣತರನ್ನು ಒಳಗೊಂಡ ತಂಡವು ವಿವಿಧ ಮಾದರಿಗಳನ್ನು ವಿಶ್ಲೇಷಿಸುತ್ತಿದೆ.







