ಕೆಮ್ಮಿನ ಸಿರಪ್ನಿಂದ ಮಕ್ಕಳ ಸಾವು ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ನಕಾರ; ಅರ್ಜಿ ವಜಾ

Photo credit: PTI
ಹೊಸದಿಲ್ಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವಿಗೀಡಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿರುವುದರಿಂದ, ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಹಾಗೂ ಔಷಧ ಸುರಕ್ಷತಾ ಯಾಂತ್ರಿಕತೆಯಲ್ಲಿ ವ್ಯವಸ್ಥಿತ ಸುಧಾರಣೆಯಾಗಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಶುಕ್ರವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸಿಬಿಐ ತನಿಖೆಗೆ ಕೋರಿದ್ದ ಅರ್ಜಿಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದ ಬಳಿಕ, ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾ. ಉಜ್ಜಲ್ ಭುಯಾನ್ ಹಾಗೂ ನ್ಯಾ. ಕೆ.ವಿನೋದ್ ಚಂದ್ರನ್ ಅವರನ್ನೊಳಗೊಂಡಿದ್ದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿತು.
ಅರ್ಜಿದಾರರು ದಿನ ಪತ್ರಿಕೆಗಳನ್ನು ಓದಿಕೊಂಡು ನ್ಯಾಯಾಲಯಕ್ಕೆ ಧಾವಿಸಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮೊದಲಿಗೆ ಈ ವಿಷಯದ ಕುರಿತು ನೋಟಿಸ್ ಜಾರಿಗೊಳಿಸುವ ಅಭಿಪ್ರಾಯ ಹೊಂದಿದ್ದ ನ್ಯಾಯಪೀಠ, ತುಷಾರ್ ಮೆಹ್ತಾರ ಆಕ್ಷೇಪದ ನಂತರ, ಅರ್ಜಿಯನ್ನು ವಜಾಗೊಳಿಸಿತು.
ಸದ್ಯ ನಾನು ಯಾವುದೇ ರಾಜ್ಯಗಳನ್ನು ಪ್ರತಿನಿಧಿಸುತ್ತಿಲ್ಲವಾದರೂ, ತಮಿಳುನಾಡು ಹಾಗೂ ಮಧ್ಯಪ್ರದೇಶದಂತಹ ರಾಜ್ಯಗಳು ತೆಗೆದುಕೊಂಡಿರುವ ಗಂಭೀರ ಕ್ರಮಗಳನ್ನು ಉಪೇಕ್ಷಿಸುವಂತಿಲ್ಲ ಎಂದು ನ್ಯಾಯಾಲಯದಲ್ಲಿ ಹಾಜರಿದ್ದ ತುಷಾರ್ ಮೆಹ್ತಾ ವಾದಿಸಿದರು. ಅಲ್ಲದೆ, ರಾಜ್ಯಗಳಲ್ಲಿ ಸೂಕ್ತ ಕಾನೂನು ಜಾರಿ ವ್ಯವಸ್ಥೆಯೂ ಇದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಬಳಿಕ, ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ತಿವಾರಿ ಎಂಬ ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದರು.







