ಆನ್ಲೈನ್ ಉದ್ಯೋಗ ವಂಚನೆ ಜಾಲದಲ್ಲಿ ಸಿಲುಕಿ ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ

ಫೋಟೋ: Twitter
ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ನಾಲ್ಕು ಮಂದಿ ಸದಸ್ಯರ ಒಂದು ಕುಟುಂಬ ಗುರುವಾರ ಆತ್ಮಹತ್ಯೆಗೆ ಶರಣಾಗಿದೆ. ದಂಪತಿ ಮೊದಲು ತಮ್ಮ ಇಬ್ಬರು ಮಕ್ಕಳಿಗೆ ವಿಷವಿಕ್ಕಿ ನಂತರ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬ ಸಾಲಬಾಧೆಯಿಂದ ಹೊರಬರಲಾರದೆ ಆತ್ಮಹತ್ಯೆಗೆ ಶರಣಾಗಿದೆ ಎಂದು ಸ್ಥಳದಲ್ಲಿ ದೊರೆತ ಸುಸೈಡ್ ನೋಟಿನಲ್ಲಿ ಬರೆದಿರುವ ವಿಚಾರವನ್ನು ಪರಿಗಣಿಸಿ ಪೊಲೀಸರು ತಿಳಿಸಿದ್ದಾರೆ.
ಭೋಪಾಲ್ ನಗರದ ನೀಲ್ಬದ್ ಪ್ರದೇಶದ ತಮ್ಮ ನಿವಾಸದಲ್ಲಿ ಕುಟುಂಬದ ನಾಲ್ಕು ಸದಸ್ಯರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳ ವಯಸ್ಸು ಎಂಟು ಮತ್ತು ಮೂರು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಸಲ್ಫೇಟ್ ಗುಳಿಗೆಗಳೂ ಪತ್ತೆಯಾಗಿವೆ.
ಮೃತ ದಂಪತಿ ಖಾಸಗಿ ವಿಮಾ ಕಂಪೆನಿಗೆ ಕೆಲಸ ಮಾಡುತ್ತಿದ್ದರು. ಸುಸೈಡ್ ನೋಟ್ನಲ್ಲಿ ತಿಳಿಸಿದಂತೆ ಕುಟುಂಬ ಸಂತೋಷದಿಂದ ಬಾಳುತ್ತಿತ್ತು. ಆದರೆ ಮನೆಯ ಯಜಮಾನ ಆನ್ಲೈನ್ ಉದ್ಯೋಗಾವಕಾಶವನ್ನು ನಂಬಿ ಸಾಕಷ್ಟು ಹಣ ಕಳೆದುಕೊಂಡು ಕೊನೆಗೆ ಸಾಲ ಮಾಡಿ ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಬರೆಯಲಾಗಿದೆ.





