ಗೋವಾ | ಮಂತ್ರವಾದಿಯ ಮಾತು ಕೇಳಿ ನೆರೆ ಮನೆಯ ಐದು ವರ್ಷದ ಮಗುವನ್ನು ಬಲಿಕೊಟ್ಟ ದಂಪತಿ

ಸಾಂದರ್ಭಿಕ ಚಿತ್ರ | NDTV
ಪಣಜಿ: ಐದು ವರ್ಷದ ಬಾಲಕಿಯನ್ನು ಮಂತ್ರವಾದಿಯೋರ್ವನ ಸಲಹೆಯಂತೆ ಬಲಿಕೊಟ್ಟು, ಹೂತುಹಾಕಿದ ಆಘಾತಕಾರಿ ಘಟನೆ ಗೋವಾದ ಪಣಜಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ದಂಪತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಬಾಬಾಸಾಹೇಬ್ ಅಲರ್(52) ಮತ್ತು ಆತನ ಪತ್ನಿ ಪೂಜಾ (45) ಕೃತ್ಯವನ್ನು ಎಸಗಿದ ಆರೋಪಿಗಳು. ಬಾಬಾಸಾಹೇಬ್ ಅಲರ್ ಮತ್ತು ಪೂಜಾ ದಂಪತಿಗೆ ಮಕ್ಕಳಿರಲಿಲ್ಲ. ಇವರು ತಮ್ಮ ಸಮಸ್ಯೆಗಳನ್ನು ಮಂತ್ರವಾದಿಯೋರ್ವನ ಬಳಿ ಹೇಳಿಕೊಂಡಿದ್ದಾರೆ. ಈ ವೇಳೆ ಆತ ಮಗುವನ್ನು ಬಲಿಕೊಡುವಂತೆ ಸಲಹೆ ನೀಡಿದ್ದಾನೆ ಎನ್ನುವುದು ತನಿಖೆಯ ವೇಳೆ ಬಯಲಾಗಿದೆ.
ಈ ಕುರಿತು ಪೊಲೀಸ್ ಉಪ ಅಧೀಕ್ಷಕ ಶಿವರಾಮ್ ವೈಗಾಂಕರ್ ಪ್ರತಿಕ್ರಿಯಿಸಿ, ಮಗು ನಾಪತ್ತೆಯಾಗಿರುವ ಬಗ್ಗೆ ಪೋಷಕರು ಬುಧವಾರ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಗು ಆರೋಪಿಯ ಮನೆಗೆ ಪ್ರವೇಶಿಸಿದೆ ಆದರೆ ಹೊರಗೆ ಬಂದಿಲ್ಲ ಎಂಬುವುದು ಕಂಡು ಬಂದಿದೆ. ವಿಚಾರಣೆ ವೇಳೆ ಮಕ್ಕಳಿಲ್ಲದ ದಂಪತಿ ಮಂತ್ರವಾದಿಯೋರ್ವನ ಸಲಹೆ ಮೇರೆಗೆ ಬಾಲಕಿಯನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಮಗುವನ್ನು ಬಲಿ ಕೊಡುವುದರಿಂದ ನಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ದಂಪತಿ ಈ ಕೃತ್ಯವನ್ನು ಎಸಗಿದ್ದಾರೆ. ವಿಚಾರಣೆಯ ವೇಳೆ ಮೃತದೇಹವನ್ನು ಕಾಂಪೌಂಡ್ನಲ್ಲಿ ಹೂತಿಟ್ಟಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ದಂಪತಿಯ ವಿರುದ್ಧ ಕೊಲೆ, ಸಾಕ್ಷ್ಯ ನಾಶಕ್ಕೆ ಸಂಬಂಧಿಸಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







