ಮಾಫಿಸಾಕ್ಷಿಯಾಗಲು ಅನುಮತಿ ಕೋರಿ ಬಂಧಿತ ‘NewsClick’ ಉದ್ಯೋಗಿಯಿಂದ ನ್ಯಾಯಾಲಯಕ್ಕೆ ಅರ್ಜಿ
ಅಮಿತ್ ಚಕ್ರವರ್ತಿ | Photo: PTI
ಹೊಸದಿಲ್ಲಿ: ‘NewsClick’ ವೆಬ್ಸೈಟ್ ವಿರುದ್ಧದ ಪ್ರಕರಣದಲ್ಲಿ ಮಾಫಿಸಾಕ್ಷಿಯಾಗಲು ಅನುಮತಿ ನೀಡಬೇಕೆಂದು ಕೋರಿ ವೆಬ್ಸೈಟ್ನ ಮಾನವ ಸಂಪನ್ಮೂಲಗಳ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ದಿಲ್ಲಿಯ ನ್ಯಾಯಾಲಯವೊಂದರಲ್ಲಿ ಅರ್ಜಿ ಸಲ್ಲಿಸಿದ್ದಾರೆ.
‘NewsClick’ ಚೀನಾ ಪರವಾಗಿ ಪ್ರಚಾರ ನಡೆಸುವುದಕ್ಕಾಗಿ ಹಣ ಪಡೆದಿದೆ ಎಂದು ಆರೋಪಿಸಿ ಪೊಲೀಸರು ಅದರ ಅಧಿಕಾರಿಗಳ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆ ಯುಎಪಿಎ ಅಡಿಯಲ್ಲಿ ಮೊಕದ್ದಮೆ ದಾಖಲಿಸಿದೆ.
ಈ ಪ್ರಕರಣದಿಂದ ತನಗೆ ಬಿಡುಗಡೆ ನೀಡಬೇಕು ಎಂದು ಕೋರಿ ಚಕ್ರವರ್ತಿ ಶನಿವಾರ ವಿಶೇಷ ನ್ಯಾಯಾಧೀಶೆ ಹರ್ದೀಪ್ ಕೌರ್ ಮುಂದೆ ಅರ್ಜಿ ಸಲ್ಲಿಸದ್ದಾರೆ. ತನ್ನಲ್ಲಿ ಪುರಾವೆಗಳಿದ್ದು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸರಿಗೆ ನೀಡಲು ಉತ್ಸುಕನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ಚಕ್ರವರ್ತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ನ್ಯಾಯಾಧೀಶರು ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಿದ್ದಾರೆ.
ದಿಲ್ಲಿ ಪೊಲೀಸರು ಅಕ್ಟೋಬರ್ 1ರಂದು ಚಕ್ರವರ್ತಿ ಮತ್ತು ನ್ಯೂಸ್ ಕ್ಲಿಕ್ ಸ್ಥಾಪಕ ಪ್ರಬೀರ್ ಪುರಕಾಯಸ್ಥರನ್ನು ಯುಎಪಿಎ ಕಾಯ್ದೆಯಡಿಯಲ್ಲಿ ಬಂಧಿಸಿದ್ದರು. ಅದಕ್ಕೂ ಮೊದಲು ಈ ವೆಬ್ಸೈಟ್ ನೊಂದಿಗೆ ನಂಟು ಹೊಂದಿದ್ದ ಹಲವು ಪತ್ರಕರ್ತರು ಮತ್ತು ಉದ್ಯೋಗಿಗಳ ಮನೆಗಳಿಗೆ ಪೊಲೀಸರು ದಾಳಿ ನಡೆಸಿದ್ದರು.
‘‘NewsClick’ ಅಮೆರಿಕದ ಶ್ರೀಮಂತ ನೆವಿಲ್ ರಾಯ್ ಸಿಂಘಮ್ ಎಂಬಾತನಿಂದ 38 ಕೋಟಿ ರೂಪಾಯಿ ನಿಧಿ ಪಡೆದಿತ್ತು ಎಂದು ಆಗಸ್ಟ್ ನಲ್ಲಿ ‘ದ ನ್ಯೂಯಾರ್ಕ್ ಟೈಮ್ಸ್’ನಲ್ಲಿ ಪ್ರಕಟವಾದ ವರದಿಯೊಂದು ಹೇಳಿತ್ತು. ಸಿಂಘಮ್ ಚೀನಾ ಕಮ್ಯುನಿಸ್ಟ್ ಪಕ್ಷ (ಸಿಪಿಸಿ)ದ ಪ್ರಚಾರ ಘಟಕದೊಂದಿಗೆ ನಿಕಟ ನಂಟು ಹೊಂದಿದ್ದಾರೆ ಎಂದು ವರದಿ ಹೇಳಿಕೊಂಡಿತ್ತು.