ಶುದ್ಧ ಗಾಳಿ ಒದಗಿಸಲಾಗದಿದ್ದರೆ ʼಏರ್ ಪ್ಯೂರಿಫೈಯರ್ʼ ಮೇಲಿನ GST ತಾತ್ಕಾಲಿಕವಾಗಿ ಕಡಿತಗೊಳಿಸಿ: ಕೇಂದ್ರಕ್ಕೆ ದಿಲ್ಲಿ ಹೈಕೋರ್ಟ್ ಸೂಚನೆ

ಸಾಂದರ್ಭಿಕ ಚಿತ್ರ (AI)
ಹೊಸದಿಲ್ಲಿ: ದಿಲ್ಲಿಯಲ್ಲಿನ ತೀವ್ರ ವಾಯು ಮಾಲಿನ್ಯ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ ಎಂದು ಕಟುವಾಗಿ ಟೀಕಿಸಿರುವ ದಿಲ್ಲಿ ಹೈಕೋರ್ಟ್, ಗಾಳಿ ಶುದ್ಧೀಕರಣ ಪರಿಕರದ (ಏರ್ ಪ್ಯೂರಿಫೈಯರ್) ಮೇಲೆ ವಿಧಿಸಲಾಗಿರುವ ಶೇ.18 ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯನ್ನು ತಾತ್ಕಾಲಿಕವಾಗಿ ಕಡಿತಗೊಳಿಸುವ ಕನಿಷ್ಠ ಕ್ರಮಕ್ಕಾದರೂ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಬುಧವಾರ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ, “ನಾಗರಿಕರಿಗೆ ಉಸಿರಾಡಲು ಶುದ್ಧ ಗಾಳಿ ಒದಗಿಸಲು ಸಾಧ್ಯವಾಗದಿದ್ದರೆ, ಏರ್ ಪ್ಯೂರಿಫೈಯರ್ ಮೇಲಿನ ಜಿಎಸ್ಟಿಯನ್ನು ಕಡಿತಗೊಳಿಸುವುದಾದರೂ ಮಾಡಬೇಕು. ಈ ಪರಿಸ್ಥಿತಿಯನ್ನು ತುರ್ತು ಪರಿಸ್ಥಿತಿಯೆಂದು ಪರಿಗಣಿಸಿ ಕನಿಷ್ಠ 15 ದಿನಗಳ ಕಾಲ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಆಲೋಚಿಸಬಹುದು” ಎಂದು ಹೇಳಿತು.
ಈ ಕುರಿತು ಪ್ರತಿಕ್ರಿಯೆ ಪಡೆದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೆ ಪೀಠ ನಿರ್ದೇಶನ ನೀಡಿತು.
“ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಗಾಳಿ ಅಗತ್ಯ. ಮಾನವನು ದಿನಕ್ಕೆ ಸುಮಾರು 21 ಸಾವಿರ ಬಾರಿ ಉಸಿರಾಡುತ್ತಾನೆ. ಈ ಮಾಲಿನ್ಯದಿಂದ ಜನರಿಗೆ ಆಗುತ್ತಿರುವ ಹಾನಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು” ಎಂದು ಪೀಠ ಅಭಿಪ್ರಾಯಪಟ್ಟಿತು.
ಗಾಳಿ ಶುದ್ಧೀಕರಣ ಯಂತ್ರಗಳನ್ನು ‘ವೈದ್ಯಕೀಯ ಸಾಧನ’ವೆಂದು ವರ್ಗೀಕರಿಸಿ, ಅವುಗಳ ಮೇಲಿನ ಜಿಎಸ್ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸುವಂತೆ ನಿರ್ದೇಶಿಸಬೇಕೆಂದು ಕೋರಿ ವಕೀಲ ಕಪಿಲ್ ಮದನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಅರ್ಜಿಯಲ್ಲಿ, ದಿಲ್ಲಿಯಲ್ಲಿನ ಭೀಕರ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಏರ್ ಪ್ಯೂರಿಫೈಯರ್ ಅನ್ನು ಐಷಾರಾಮಿ ವಸ್ತುಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಲಾಗಿದೆ. 2020ರ ಅಧಿಸೂಚನೆಯ ಪ್ರಕಾರ ಈ ಉಪಕರಣಗಳು ‘ವೈದ್ಯಕೀಯ ಸಾಧನ’ಗಳ ಮಾನದಂಡಗಳನ್ನು ಪೂರೈಸುತ್ತವೆ. ಒಳಾಂಗಣ ಗಾಳಿಯನ್ನು ಸುರಕ್ಷಿತಗೊಳಿಸಿ ಜೀವಕ್ಕೆ ಅಪಾಯಕಾರಿ ಮಾಲಿನ್ಯ ಒಡ್ಡಿಕೊಳ್ಳುವಿಕೆಯನ್ನು ಕಡಿಮೆ ಮಾಡುವ ಮೂಲಕ ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಅವು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಏರ್ ಪ್ಯೂರಿಫೈಯರ್ ಮೇಲೆ ಶೇ.18 ಜಿಎಸ್ಟಿ ವಿಧಿಸುವುದು ಅನಿಯಂತ್ರಿತ, ಅಸಮಂಜಸ ಹಾಗೂ ಅಸಾಂವಿಧಾನಿಕವಾಗಿ ಕ್ರಮ ಎಂದು ಅರ್ಜಿದಾರರು ವಾದಿಸಿದ್ದರು. ಅರ್ಜಿಯನ್ನು ವಕೀಲರಾದ ಗುರುಮುಖ್ ಸಿಂಗ್ ಅರೋರಾ ಮತ್ತು ರಾಹುಲ್ ಮಥಾರು ಸಲ್ಲಿಸಿದ್ದಾರೆ.







