ಷೇರು ಮಾರುಕಟ್ಟೆ ವಂಚನೆ : ಸೆಬಿಯ ಮಾಜಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚಿಸಿದ ನ್ಯಾಯಾಲಯ

ಮಾಧಬಿ ಪುರಿ ಬುಚ್ | PTI
ಮುಂಬೈ: ಷೇರು ಮಾರುಕಟ್ಟೆ ವಂಚನೆ ಮತ್ತು ಅಸ್ತಿತ್ವದಲ್ಲಿರುವ ನಿಯಮಾವಳಿಗಳ ಉಲ್ಲಂಘನೆಗಾಗಿ ಸೆಬಿಯ ಮಾಜಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಇತರ ಐವರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮುಂಬೈನ ವಿಶೇಷ ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನಿರ್ದೇಶನ ನೀಡಿದೆ.
ʼಕಾನೂನಿನ ಲೋಪಗಳು ಮತ್ತು ಒಳಒಪ್ಪಂದದ ಬಗ್ಗೆ ಪ್ರಾಥಮಿಕ ಸಾಕ್ಷ್ಯಗಳಿದ್ದು, ಈ ಕುರಿತು ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆʼ ಎಂದು ಎಸಿಬಿ ನ್ಯಾಯಾಲಯದ ನ್ಯಾಯಾಧೀಶರಾದ ಶಶಿಕಾಂತ್ ಏಕನಾಥರಾವ್ ಬಂಗಾರ್ ಅವರು ಹೇಳಿದ್ದಾರೆ.
ಮಾಧಬಿ ಪುರಿ ಬುಚ್ ಜೊತೆಗೆ ಬಿಎಸ್ಇಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರರಾಮನ್ ರಾಮಮೂರ್ತಿ, ಸಾರ್ವಜನಿಕ ಹಿತಾಸಕ್ತಿ ನಿರ್ದೇಶಕ ಪ್ರಮೋದ್ ಅಗರ್ವಾಲ್, ಸೆಬಿಯ ಸದಸ್ಯರಾದ ಅಶ್ವನಿ ಭಾಟಿಯಾ, ಅನಂತ್ ನಾರಾಯಣ ಮತ್ತು ಕಮಲೇಶ್ ಚಂದ್ರ ವರ್ಷಿನಿ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಈ ಕುರಿತ ತನಿಖೆಯನ್ನು ಮೇಲ್ವಿಚಾರಣೆ ಮಾಡುವುದಾಗಿ ನ್ಯಾಯಾಲಯ ಹೇಳಿದ್ದು, 30 ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಎಸಿಬಿಗೆ ಸೂಚಿಸಿದೆ.
ಸಪನ್ ಶ್ರೀವಾಸ್ತವ ಎಂಬವರು ಮಾಧಬಿ ಪುರಿ ಬುಚ್ ಮತ್ತು ಇತರರ ವಿರುದ್ಧದ ಹಣಕಾಸು ವಂಚನೆ, ನಿಯಮಾವಳಿಗಳ ಉಲ್ಲಂಘನೆ ಮತ್ತು ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದರು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಮುಂಬೈನ ವಿಶೇಷ ನ್ಯಾಯಾಲಯ ಈ ಮಹತ್ವದ ಆದೇಶವನ್ನು ನೀಡಿದೆ.







