Uttar Pradesh | ದಾದ್ರಿಯಲ್ಲಿ ಗುಂಪಿನಿಂದ ಅಖ್ಲಾಕ್ ರ ಹತ್ಯೆ ಪ್ರಕರಣ: ಪ್ರಕರಣ ಹಿಂಪಡೆಯುವ ಸರ್ಕಾರದ ನಡೆಗೆ ನ್ಯಾಯಾಲಯದಿಂದ ತಡೆ

Photo Credit : thehindu.com
ದಾದ್ರಿ, ಡಿ.23: ದಾದ್ರಿಯಲ್ಲಿ ಮೊಹಮ್ಮದ್ ಅಖ್ಲಾಕ್ ಅವರನ್ನು ಗುಂಪು ಥಳಿತ ಮಾಡಿ ಹತ್ಯೆಗೈದ ಪ್ರಕರಣದಲ್ಲಿನ ಆರೋಪಿಗಳ ವಿರುದ್ಧದ ಪ್ರಾಸಿಕ್ಯೂಷನ್ ಪ್ರಕರಣವನ್ನು ಹಿಂಪಡೆಯಲು ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಗೌತಮ್ ಬುದ್ಧ ನಗರ ಜಿಲ್ಲೆಯ ಸೂರಜ್ ಪುರದಲ್ಲಿರುವ ತ್ವರಿತ ನ್ಯಾಯಾಲಯವು ಮಂಗಳವಾರ ಈ ಮಹತ್ವದ ಆದೇಶ ಹೊರಡಿಸಿದೆ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸೌರಭ್ ದ್ವಿವೇದಿ ಅವರು, 14 ಆರೋಪಿಗಳ ವಿರುದ್ಧದ ಪ್ರಾಸಿಕ್ಯೂಷನ್ ಹಿಂಪಡೆಯುವಂತೆ ಕ್ರಿಮಿನಲ್ ಪ್ರೊಸೀಜರ್ ಕೋಡ್ ನ ಸೆಕ್ಷನ್ 321 ಅಡಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದರು. ಇದು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಇಂತಹ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ಆರೋಪಗಳನ್ನು ಹಿಂಪಡೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದ ದೈನಂದಿನ ವಿಚಾರಣೆ ನಡೆಸಿ ಸಾಕ್ಷ್ಯಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆ 2026ರ ಜನವರಿ 6ರಂದು ನಡೆಯಲಿದೆ.
ರಾಜ್ಯ ಸರ್ಕಾರವು ಕಳೆದ ಅಕ್ಟೋಬರ್ನಲ್ಲಿ ಈ ಪ್ರಕರಣವನ್ನು ಹಿಂಪಡೆಯುವುದಾಗಿ ಹೇಳಿತ್ತು. ಅದರಂತೆ, ಸರ್ಕಾರದ ನಿರ್ದೇಶನಗಳನ್ನು ಉಲ್ಲೇಖಿಸಿ ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ಭಾಗ್ ಸಿಂಗ್ ಭಾಟಿ ಅವರು ಆಗಸ್ಟ್ 26, 2025ರಂದು ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಸರ್ಕಾರದ ಈ ನಿಲುವನ್ನು ನ್ಯಾಯಾಲಯ ಒಪ್ಪಲಿಲ್ಲ.
2015ರ ಸೆಪ್ಟೆಂಬರ್ 28ರಂದು ದಾದ್ರಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ದೇವಾಲಯದಿಂದ ‘ಗೋ ಹತ್ಯೆ’ ಆರೋಪದ ಘೋಷಣೆ ಕೇಳಿಬಂದ ನಂತರ ಅಖ್ಲಾಕ್ ಅವರ ಮನೆಯ ಮುಂದೆ ಜನಸಮೂಹ ಜಮಾಯಿಸಿತ್ತು. ಅಖ್ಲಾಕ್ ಮತ್ತು ಅವರ ಪುತ್ರ ದಾನಿಷ್ ಅವರನ್ನು ಮನೆಯಿಂದ ಹೊರಕ್ಕೆ ಎಳೆದುಕೊಂಡು ಹೋಗಿ ಪ್ರಜ್ಞೆ ತಪ್ಪುವವರೆಗೆ ಹಲ್ಲೆ ನಡೆಸಲಾಗಿತ್ತು. ಗಂಭೀರ ಗಾಯಗೊಂಡ ಅಖ್ಲಾಕ್ ಅವರನ್ನು ನೋಯ್ಡಾದ ಆಸ್ಪತ್ರೆಗೆ ದಾಖಲಿಸಲಾಗಿತ್ತಚ, ಅಲ್ಲಿ ಅವರು ಮೃತಪಟ್ಟಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಜಾರ್ಚಾ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳು 302 (ಕೊಲೆ), 307 (ಕೊಲೆಗೆ ಪ್ರಯತ್ನ), 147, 148, 149 (ಗಲಭೆ), 323 (ಹಲ್ಲೆ), 504 (ಶಾಂತಿ ಕದಡಲು ಉದ್ದೇಶಪೂರ್ವಕ ಅವಮಾನ) ಸೇರಿದಂತೆ ಹಲವು ಕಲಂಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಂತರ ಪೊಲೀಸರು 15 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಸ್ಥಳೀಯ ಬಿಜೆಪಿ ನಾಯಕನ ಪುತ್ರ ವಿಶಾಲ್ ರಾಣಾ ಪ್ರಮುಖ ಆರೋಪಿ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಯಾಲಯದ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸಿದೆ. “ಗುಂಪು ಹತ್ಯೆಯಂತಹ ಘೋರ ಅಪರಾಧದಲ್ಲಿ ಆರೋಪ ಹಿಂಪಡೆಯಲು ಸರ್ಕಾರ ಮುಂದಾಗಿರುವುದು ಅಪಾಯಕಾರಿ ಪ್ರವೃತ್ತಿ. ನ್ಯಾಯಾಲಯ ನೀಡಿರುವ ಆದೇಶ ನ್ಯಾಯದ ಪರವಾದ ಸ್ಪಷ್ಟ ಸಂದೇಶವಾಗಿದೆ,” ಎಂದು ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಅನಿಲ್ ಯಾದವ್ ಹೇಳಿದ್ದಾರೆ.
ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿ, ಆದೇಶ ನೀಡಿದ ನ್ಯಾಯಾಧೀಶರಿಗೆ ಸಮರ್ಪಕ ಭದ್ರತೆ ಒದಗಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.







