ಐದು ಸಾವಿರದ ಗಡಿ ದಾಟಿದ ದೇಶದಲ್ಲಿಯ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ಬಿಡುಗಡೆಗೊಳಿಸಿರುವ ದತ್ತಾಂಶಗಳ ಪ್ರಕಾರ ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಐದು ಸಾವಿರವನ್ನು ದಾಟಿದ್ದು,ಕೇರಳ ಅತಿ ಹೆಚ್ಚು ಪೀಡಿತ ರಾಜ್ಯವಾಗಿದೆ. ಗುಜರಾತ್,ಪಶ್ಚಿಮ ಬಂಗಾಳ ಮತ್ತು ದಿಲ್ಲಿ ನಂತರದ ಸ್ಥಾನಗಳಲ್ಲಿವೆ.
ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಮಟ್ಟದಲ್ಲಿ ಕೋವಿಡ್ ಸಿದ್ಧತೆಯನ್ನು ಪರಿಶೀಲಿಸಲು ಕೇಂದ್ರವು ಅಣಕು ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಆಕ್ಸಿಜನ್,ಪ್ರತ್ಯೇಕ ಹಾಸಿಗೆಗಳು,ವೆಂಟಿಲೇಟರ್ಗಳು ಮತ್ತು ಅಗತ್ಯ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಲಾಗಿದೆ.
ದೇಶದಲ್ಲಿ 5,364 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು,ಕಳೆದ 24 ಗಂಟೆಗಳಲ್ಲಿ ಹೊಸದಾಗಿ ನಾಲ್ಕು ಸಾವುಗಳು ವರದಿಯಾಗಿವೆ.
ಹೆಚ್ಚಿನ ಪ್ರಕರಣಗಳು ಸೌಮ್ಯವಾಗಿದ್ದು,ಸೋಂಕಿತರು ಮನೆಗಳಲ್ಲಿಯೇ ಆರೈಕೆ ಪಡೆಯುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ವರ್ಷದ ಜನವರಿಯಿಂದ ದೇಶದಲ್ಲಿ 55 ಸಾವುಗಳು ವರದಿಯಾಗಿವೆ. ಮೇ 22ರಂದು ಒಟ್ಟು 257 ಸಕ್ರಿಯ ಪ್ರಕರಣಗಳಿದ್ದವು.
ಆರೋಗ್ಯ ಸೇವೆಗಳ ಮಹಾ ನಿರ್ದೇಶಕಿ ಡಾ.ಸುನೀತಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಜೂ.2 ಮತ್ತು 3ರಂದು ಸರಣಿ ತಾಂತ್ರಿಕ ಪರಿಶೀಲನೆ ಸಭೆಗಳು ನಡೆದಿದ್ದು,ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ,ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳು,ದಿಲ್ಲಿಯಲ್ಲಿನ ಕೇಂದ್ರ ಸರಕಾರಿ ಆಸ್ಪತ್ರೆಗಳು ಹಾಗೂ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರಸಕ್ತ ಕೋವಿಡ್ ಸ್ಥಿತಿ ಮತ್ತು ಸನ್ನದ್ಧತಾ ಕ್ರಮಗಳ ಬಗ್ಗೆ ಈ ಸಭೆಗಳಲ್ಲಿ ಚರ್ಚಿಸಲಾಗಿತ್ತು.
ಸಮಗ್ರ ರೋಗಗಳ ಕಣ್ಗಾವಲು ಕಾರ್ಯಕ್ರಮ(ಐಡಿಎಸ್ಪಿ)ದಡಿ ರಾಜ್ಯ ಮತ್ತು ಜಿಲ್ಲಾ ಕಣ್ಗಾವಲು ಘಟಕಗಳು ಇನ್ಪ್ಲುಯೆಂಝಾದಂತಹ ಕಾಯಿಲೆ(ಐಎಲ್ಐ) ಮತ್ತು ತೀವ್ರತರವಾದ ಉಸಿರಾಟ ಸೋಂಕು ಕಾಯಿಲೆ(ಎಸ್ಎಆರ್ಐ) ಗಳ ಮೇಲೆ ನಿಕಟ ನಿಗಾಯಿರಿಸಿವೆ ಎಂದು ಅಧಿಕೃತ ಮೂಲಗಳು ಜ.4ರಂದು ತಿಳಿಸಿದ್ದವು.







