“ಕೋವಿಡ್ ಎಚ್ಚರ ಅಗತ್ಯ, ಆದರೆ ಭಯ ಬೇಡ”: ಸಚಿವ ಮನ್ಸುಖ್ ಮಾಂಡವೀಯ
ಪರಾಮರ್ಶನಾ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವರ ಸೂಚನೆ
ಮನ್ಸುಖ್ | Photo: PTI
ಹೊಸದಿಲ್ಲಿ: ದೇಶದಲ್ಲಿ ಕೋವಿಡ್ 19 ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿರುವಂತೆಯೇ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅವರು ದೇಶಾದ್ಯಂತದ ಆರೋಗ್ಯ ಕೇಂದ್ರಗಳ ಸನ್ನದ್ಧತೆಯ ಬಗ್ಗೆ ಬುಧವಾರ ಪರಾಮರ್ಶೆ ನಡೆಸಿದರು ಹಾಗೂ ಸೋಂಕಿನ ಪ್ರಕರಣಗಳ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಹಾಗೂ ನಿಗಾವಣೆಯನ್ನು ಹೆಚ್ಚಿಸುವಂತೆ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದರು.
ಕೇಂದ್ರದಿಂದ ರಾಜ್ಯಗಳಿಗೆ ಎಲ್ಲಾ ರೀತಿಯ ಬೆಂಬಲದ ಭರವಸೆ ನೀಡಿದ ಅವರು, ಕೋವಿಡ್ ಸಾಂಕ್ರಾವಿಕದ ವಿರುದ್ಧ ನಾವು ಕಟ್ಟೆಚ್ಚರ ವಹಿಸಬೇಕಾದ ಅಗತ್ಯವಿದೆ. ಆದರೆ ಭಯಭೀತರಾಗುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಆಸ್ಪತ್ರೆಯ ಸನ್ನದ್ದತೆಯ ಬಗ್ಗೆ ಅಣಕು ಕವಾಯತುಗಳನ್ನು ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಜನರೊಂದಿಗೆ ನಿಗಾವಣೆ ಹಾಗೂ ಪರಿಣಾಮಕಾರಿ ಸಂವಹನವನ್ನು ಸಾಧಿಸಬೇಕಾಗಿದೆಯೆಂದು ಸಚಿವರು ತಿಳಿಸಿದ್ದಾರೆ.
ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲಾ ಆಸ್ಪತ್ರೆಗಳು ಅಣಕು ಕವಾಯತುಗಳನ್ನು ನಡೆಸಬೇಕಾದ ಅಗತ್ಯವಿದೆಯೆಂದು ಆರೋಗ್ಯ ಸಚಿವರು ಒತ್ತಿ ಹೇಳಿದರು. ಚಳಿಗಾಲದಲ್ಲಿ ಎಲ್ಲಾ ಹಬ್ಬಗಳ ಆಗಮನಕ್ಕೆ ಮುಂಚಿತವಾಗಿ ಪ್ರತಿಬಂಧಾತ್ಮಕ ಕ್ರಮಗಳನ್ನು ಕೈಗೊಳ್ಳುವುದನ್ನು ಖಾತರಿಪಡಿಸು ವಂತೆ ಆರೋಗ್ಯ ಸಚಿವರು ಪ್ರತಿಪಾದಿಸಿದರು.
‘‘ ಸೋಂಕಿನ ವಿರುದ್ಧ ನಮ್ಮ ಸಿದ್ಧತೆಯಲ್ಲಿ ಯಾವುದೇ ಸಡಿಲತೆಯಿರಕೂಡದು. ಆರೋಗ್ಯವೆಂಬುದು ಯಾವುದೇ ರಾಜಕೀಯಕ್ಕೆ ಸೀಮಿತವಾದ ಕ್ಷೇತ್ರವಲ್ಲ. ಯಾವುದೇ ರೀತಿಯ ಬೆಂಬಲ ನೀಡಲೂ ಕೇಂದ್ರ ಗೃಹ ಸಚಿವಾಲಯವು ಲಭ್ಯವಿರುವುದು. ಸರಕಾರದ ಎಲ್ಲಾ ಅಂಗಗಳು ಸಮನ್ವಯತೆಯ ನಿಲುವಿನೊಂದಿಗೆ ಕಾರ್ಯನಿರ್ವಹಿಸಲು ಇದು ಸಕಾಲವಾಗಿದೆ’’ ಎಂದವರು ಹೇಳಿದರು.
ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು ಹಾಗೂ ಹೆಚ್ಚುವರಿ ಮುಖ್ಯ ಪ್ರಧಾನ ಕಾರ್ಯದರ್ಶಿ (ಆರೋಗ್ಯ)ಗಳ ಮುಖ್ಯ ಪ್ರಧಾನ ಕಾರ್ಯದರ್ಶಿಗಳು, ಕೇಂದ್ರ ಸಚಿವರ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.