Uttar Pradesh | ಸಿಎಂ ಆದಿತ್ಯನಾಥ್ ಕಾರಿನತ್ತ ನುಗ್ಗಿದ ಬೀಡಾಡಿ ದನ!

ಆದಿತ್ಯನಾಥ್ | Photo Credit : PTI
ಗೋರಖ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಭದ್ರತೆಯಲ್ಲಿ ಒಂದು ತಿಂಗಳೊಳಗೆ ಎರಡನೇ ಬಾರಿ ಆತಂಕಕಾರಿ ಘಟನೆ ನಡೆದಿದೆ. ಗೋರಖ್ಪುರದಲ್ಲಿ ಸಿಎಂ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾರಿನಿಂದ ಇಳಿದ ಕೆಲವೇ ಕ್ಷಣಗಳಲ್ಲಿ ದಾರಿ ತಪ್ಪಿ ಬಂದ ಹಸು ಮುಖ್ಯಮಂತ್ರಿ ವಾಹನದ ಸಮೀಪಕ್ಕೆ ಬಂದಿದ್ದು, ಭದ್ರತಾ ಸಿಬ್ಬಂದಿ ಒಂದು ಕ್ಷಣ ಅವಕ್ಕಾದರು ಎಂದು ವರದಿಯಾಗಿದೆ.
ಶುಕ್ರವಾರ ಸಂಜೆ ಗೋರಖ್ನಾಥ್ ಮೇಲ್ಸೇತುವೆ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಈ ಘಟನೆ ಸಂಭವಿಸಿದೆ. ರವಿವಾರ ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇರೆಗೆ ಪುರಸಭೆಯ ಮೇಲ್ವಿಚಾರಕರನ್ನು ಅಮಾನತುಗೊಳಿಸಲಾಗಿದೆ.
ವೀಡಿಯೊದಲ್ಲಿ, ಮೊದಲು ಸಂಸದ ರವಿ ಕಿಶನ್ ವಾಹನದಿಂದ ಇಳಿಯುತ್ತಾರೆ. ಅವರ ಹಿಂದೆಯೇ ಮುಖ್ಯಮಂತ್ರಿ ಇಳಿಯುವ ಸಂದರ್ಭದಲ್ಲಿ, ಹಸು ಕಾರಿನತ್ತ ಬಂದಿರುವುದು ಕಾಣುತ್ತದೆ. ತಕ್ಷಣವೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಬೀಡಾಡಿ ದನವನ್ನು ಸುತ್ತುವರಿದು ದೂರಕ್ಕೆ ಓಡಿಸಿದ್ದಾರೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.
ಈ ಕುರಿತು ಪುರಸಭೆ ಆಯುಕ್ತ ಗೌರವ್ ಸಿಂಗ್ ಸೋಗ್ರಾವಾಲ್, ಪ್ರಮಾಣಿತ ಭದ್ರತಾ ಕ್ರಮಗಳಿದ್ದರೂ ಪ್ರಾಣಿ ಭದ್ರತೆಯನ್ನು ಹೇಗೆ ಉಲ್ಲಂಘಿಸಿತು ಎಂಬುದರ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪುರಸಭೆಯ ಮೇಲ್ವಿಚಾರಕ ಅರವಿಂದ್ ಕುಮಾರ್ ಕರ್ತವ್ಯ ಲೋಪ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ. ಆ ಪ್ರದೇಶದ ನಾಗರಿಕ ವ್ಯವಸ್ಥೆಗಳ ಮೇಲ್ವಿಚಾರಣೆ ಅವರ ಜವಾಬ್ದಾರಿಯಾಗಿತ್ತು.
ವಿವಿಐಪಿ ಭದ್ರತೆಯಲ್ಲಿ ಯಾವುದೇ ಲೋಪವನ್ನು ಸಹಿಸಲಾಗುವುದಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ವ್ಯವಸ್ಥೆಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಬೀಡಾಡಿ ದನಗಳ ಸಮಸ್ಯೆಯನ್ನು ವಿರೋಧ ಪಕ್ಷಗಳು ಆಗಾಗ್ಗೆ ಪ್ರಸ್ತಾಪಿಸುತ್ತಿವೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಇದಕ್ಕೂ ಮೊದಲು ಡಿಸೆಂಬರ್ 2ರಂದು ವಾರಾಣಸಿಯ ನಮೋ ಘಾಟ್ನಲ್ಲಿ ನಡೆದ ಕಾಶಿ ತಮಿಳು ಸಂಗಮ್ 4.0 ಕಾರ್ಯಕ್ರಮದ ವೇಳೆ ಮತ್ತೊಂದು ಭದ್ರತಾ ಲೋಪ ಕಂಡು ಬಂದಿತ್ತು. ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಭದ್ರತಾ ವಲಯವನ್ನು ಭೇದಿಸಿ ವೇದಿಕೆಯತ್ತ ಮುನ್ನಡೆಯಲು ಯತ್ನಿಸಿದ್ದ. ತಕ್ಷಣವೇ ಭದ್ರತಾ ಕಮಾಂಡೋಗಳು ಆತನನ್ನು ವಶಕ್ಕೆ ಪಡೆದಿದ್ದರು.







