ಸಿ.ಪಿ.ರಾಧಾಕೃಷ್ಣನ್ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿಸಿರುವುದರಿಂದ ತಮಿಳುನಾಡಿಗೆ ಯಾವುದೇ ಲಾಭವಿಲ್ಲ: ಡಿಎಂಕೆ

ಸಿ.ಪಿ.ರಾಧಾಕೃಷ್ಣನ್ | PC : X
ಚೆನ್ನೈ: ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಬಿಜೆಪಿಯು ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿಸಿರುವುದರಿಂದ, ತಮಿಳುನಾಡಿಗೆ ಯಾವುದೇ ಬಗೆಯ ಪ್ರಯೋಜನವಿಲ್ಲ ಎಂದು ಸೋಮವಾರ ಡಿಎಂಕೆಯ ಹಿರಿಯ ನಾಯಕ ಟಿ.ಕೆ.ಎಸ್.ಎಳಂಗೋವನ್ ಹೇಳಿದ್ದಾರೆ.
ಸಿ.ಪಿ.ರಾಧಾಕೃಷ್ಣನ್ ಅವರಿಗೆ ಡಿಎಂಕೆ ಯಾಕೆ ಬೆಂಬಲ ನೀಡಬೇಕು ಎಂದು ಸೋಜಿಗ ವ್ಯಕ್ತಪಡಿಸಿದ ಮಾಜಿ ರಾಜ್ಯಸಭಾ ಸಂಸದ ಎಳಂಗೋವನ್, ನಮ್ಮ ಪಕ್ಷವು ಇಂಡಿಯಾ ಮೈತ್ರಿಕೂಟದ ನಿರ್ಧಾರಕ್ಕೆ ಬದ್ಧವಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇಂಡಿಯಾ ಮೈತ್ರಿಕೂಟದಲ್ಲಿ ಡಿಎಂಕೆ ಪ್ರಮುಖ ಅಂಗಪಕ್ಷವಾಗಿದೆ.
ರಾಧಾಕೃಷ್ಣನ್ ಅವರನ್ನು ಉಪ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಿರುವುದು ಅವರಿಗೆ ದೊರೆತಿರುವ ಪದೋನ್ನತಿಯೇ ಹೊರತು, ಇದರಿಂದ ತಮಿಳುನಾಡಿಗೆ ಯಾವುದೇ ಒಳಿತಾಗುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ನಿನ್ನೆ (ರವಿವಾರ) ನಡೆದ ಬಿಜೆಪಿಯ ಸಂಸದೀಯ ಮಂಡಳಿ ಸಭೆಯಲ್ಲಿ ತಮಿಳುನಾಡು ಮೂಲದ, ಪ್ರಸಕ್ತ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಎನ್ಡಿಎ ಮೈತ್ರಿಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿತ್ತು.





