ಪಹಲ್ಗಾಮ್ ದಾಳಿ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರು ಮತ್ತು ಕಾಶ್ಮೀರಿಗಳ ಮೇಲಿನ ದಾಳಿಗೆ ಸಿಪಿಎಂ ಖಂಡನೆ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮುಸ್ಲಿಮರು ಹಾಗೂ ಕಾಶ್ಮೀರಿಗಳ ಮೇಲಿನ ದಾಳಿ ಹಾಗೂ ಕಿರುಕುಳವನ್ನು ಸಿಪಿಐ(ಎಂ) ರವಿವಾರ ಖಂಡಿಸಿದೆ.
ಪ್ರತೀಕಾರದ ಪ್ರತಿಕ್ರಿಯೆ ಭಯೋತ್ಪಾದಕ ಕಾರ್ಯಸೂಚಿಗೆ ಇಂಬು ನೀಡುತ್ತದೆ ಹಾಗೂ ಸಾರ್ವಜನಿಕರಲ್ಲಿ ವಿಭಜನೆಯನ್ನು ಸೃಷ್ಟಿಸುತ್ತದೆ ಎಂದು ಅದು ಹೇಳಿದೆ.
‘‘ಸಾಮಾಜಿಕ ಮಾಧ್ಯಮದಲ್ಲಿ ಮುಸ್ಲಿಮರು ಹಾಗೂ ಕಾಶ್ಮೀರಿಗಳ ವಿರುದ್ಧ ನಡೆಸಲಾಗುತ್ತಿರುವ ದ್ವೇಷ ಅಭಿಯಾನ ಹಾಗೂ ಅವರ ಮೇಲಿನ ದಾಳಿಗಳನ್ನು ಪಾಲಿಟ್ ಬ್ಯುರೊ ಖಂಡಿಸುತ್ತದೆ. ಇಂತಹ ಮತಾಂಧ ಅಂಶಗಳು ಜನರನ್ನು ವಿಭಜಿಸುವ ಭಯೋತ್ಪಾದಕರ ಗುರಿಗೆ ನೆರವು ನೀಡುತ್ತದೆ’’ ಎಂದು ದಿಲ್ಲಿಯಲ್ಲಿ ಶನಿವಾರ ನಡೆದ ಪಾಲಿಟ್ ಬ್ಯುರೊ ಸಭೆಯ ಬಳಿಕ ಸಿಪಿಎಂ ತಿಳಿಸಿದೆ.
ದಕ್ಷಿಣ ಕಾಶ್ಮೀರದ ಜನಪ್ರಿಯ ಬೆಟ್ಟ ಪ್ರದೇಶದಲ್ಲಿ 26 ಪ್ರವಾಸಿಗರನ್ನು ಹತ್ಯೆಗೈದ ಘಟನೆಯನ್ನು ಪ್ರಮುಖ ಭದ್ರತಾ ವೈಫಲ್ಯ ಎಂದು ಹೇಳಿದ ಸಿಪಿಎಂ, ದಾಳಿಕೋರರು ಹಾಗೂ ಅವರಿಗೆ ನೆರವು ನೀಡಿದವರನ್ನು ಗುರುತಿಸುವುದು ಸರಕಾರದ ಆದ್ಯತೆಯಾಗಬೇಕು. ಅಂತಾರಾಷ್ಟ್ರೀಯ ಸಮುದಾಯದ ಮುಂದಿರಿಸಲು ಒಂದು ಕಡತವನ್ನು ಸಿದ್ಧಗೊಳಿಸಬೇಕು ಎಂದು ಹೇಳಿದೆ.
ಸೂಕ್ತ ಹಸ್ತಕ್ಷೇಪಕ್ಕೆ ಈ ವಿಷಯವನ್ನು ಹಣಕಾಸು ಕ್ರಮ ಕಾರ್ಯ ಪಡೆಯ ಮುಂದೆ ತರಬೇಕು ಎಂದು ಅದು ತಿಳಿಸಿದೆ. ಈ ಹತ್ಯೆಯ ಬಳಿಕ ಕಾಶ್ಮೀರಿಗಳು ನಡೆಸುತ್ತಿರುವ ಪ್ರತಿಭಟನೆ ಹಾಗೂ ಖಂಡನೆ ಅತ್ಯಂತ ಮಹತ್ವದ ಘಟನೆ ಎಂದು ಸಿಪಿಎಂ ಹೇಳಿದೆ.







