ಮಾವೋವಾದಿಗಳ ಎನ್ ಕೌಂಟರ್ ಗೆ ಸಿಪಿಎಂ ಖಂಡನೆ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಛತ್ತೀಸ್ ಗಡದಲ್ಲಿ ಸಿಪಿಐ(ಮಾವೋವಾದಿ) ಪ್ರಧಾನ ಕಾರ್ಯದರ್ಶಿ ನಂಬಳ ಕೇಶವರಾವ್ ಸೇರಿದಂತೆ 27 ಮಾವೋವಾದಿಗಳ ಹತ್ಯೆಯನ್ನು ಸಿಪಿಎಂ ಗುರುವಾರ ಬಲವಾಗಿ ಖಂಡಿಸಿದೆ. ಮಾತುಕತೆಗಳಿಗಾಗಿ ಮಾವೋವಾದಿಗಳು ಪದೇ ಪದೇ ಮಾಡಿಕೊಂಡಿದ್ದ ಮನವಿಗಳನ್ನು ಕಡೆಗಣಿಸಲಾಗಿತ್ತು ಮತ್ತು ಕೇಂದ್ರ ಹಾಗೂ ಬಿಜೆಪಿ ನೇತೃತ್ವದ ಛತ್ತೀಸ್ ಗಡ ಸರಕಾರಗಳು ಸಂವಾದದ ಮೂಲಕ ಪರಿಹಾರವನ್ನು ಕಂಡುಕೊಳ್ಳುವ ಮಾರ್ಗವನ್ನು ಅನುಸರಿಸಿರಲಿಲ್ಲ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಹೇಳಿಕೆಯಲ್ಲಿ ತಿಳಿಸಿದೆ.
ಬದಲಾಗಿ ಅವರು ಹತ್ಯೆ ಮತ್ತು ವಿನಾಶದ ಅಮಾನವೀಯ ನೀತಿಯನ್ನು ಅನುಸರಿಸುತ್ತಿದ್ದಾರೆ. ಗಡುವನ್ನು ಪುನರುಚ್ಚರಿಸಿ ಕೇಂದ್ರ ಸಚಿವರ ಹೇಳಿಕೆಗಳು ಮತ್ತು ಮಾತುಕತೆಗಳ ಅಗತ್ಯವಿಲ್ಲ ಎಂಬ ಛತ್ತೀಸ್ ಗಡ ಸರಕಾರದ ಹೇಳಿಕೆ ಮಾನವ ಜೀವಗಳನ್ನು ಬಲಿಯನ್ನು ಸಂಭ್ರಮಿಸುವ ಫ್ಯಾಸಿಸ್ಟ್ ಮನಃಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿವೆ ಎಂದು ಹೇಳಿರುವ ಸಿಪಿಎಂ, ಮಾತುಕತೆಗೆ ಮನವಿಯನ್ನು ಪರಿಗಣಿಸುವಂತೆ ಹಲವಾರು ರಾಜಕೀಯ ಪಕ್ಷಗಳು ಮತ್ತು ಆತಂಕಿತ ನಾಗರಿಕರು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ.
‘ಮಾವೋವಾದಿಗಳ ರಾಜಕೀಯಕ್ಕೆ ನಮ್ಮ ವಿರೋಧದ ಹೊರತಾಗಿಯೂ ಮಾತುಕತೆಗಳಿಗಾಗಿ ಅವರ ಮನವಿಗಳನ್ನು ತಕ್ಷಣ ಒಪ್ಪಿಕೊಳ್ಳುವಂತೆ ಮತ್ತು ಎಲ್ಲ ಅರೆ ಸೇನಾಪಡೆಗಳ ಕಾರ್ಯಾಚರಣೆಗಳನ್ನು ನಿಲ್ಲಿಸುವಂತೆ ನಾವು ಸರಕಾರವನ್ನು ಆಗ್ರಹಿಸುತ್ತೇವೆ’ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಸಿಪಿಐ ಮತ್ತು ಸಿಪಿಐ(ಎಂಎಲ್) ಕೂಡ ಮಾವೋವಾದಿಗಳ ಹತ್ಯೆಗಳನ್ನು ಖಂಡಿಸಿದ್ದು, ನ್ಯಾಯಾಂಗ ತನಿಖೆಗೆ ಆಗ್ರಹಿಸಿವೆ.





