ಆಡಿಟ್ ನಡೆಸಲು ಖಾಸಗಿ ಸಂಸ್ಥೆಗಳಿಗೆ ಸಿಎಜಿ ಆಹ್ವಾನ: ರಾಷ್ಟ್ರಪತಿಗಳ ಮಧ್ಯಪ್ರವೇಶಕ್ಕೆ ಸಿಪಿಎಂ ಸಂಸದನ ಆಗ್ರಹ

ಸಿಪಿಎಂ ಸಂಸದ ಎಸ್.ವೆಂಕಟೇಶನ್ | ANI
ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಸ್ವಾಯತ್ತ ಮತ್ತು ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಗೆ ಚಾರ್ಟರ್ಡ್ ಅಕೌಂಟಂಟ್(ಸಿಎ)ಗಳನ್ನು ನೇಮಕಗೊಳಿಸುವ ಮಹಾಲೇಖಪಾಲ(ಸಿಎಜಿ)ರ ಕ್ರಮವನ್ನು ಅಧಿಕಾರಿಗಳ ಸಂಘವು ಟೀಕಿಸಿದೆ. ‘ಇದು ಅತ್ಯಂತ ಅಪಾಯಕಾರಿ’ ಎಂದು ಬಣ್ಣಿಸಿರುವ ಹಿರಿಯ ಸಿಪಿಎಂ ಸಂಸದ ಎಸ್.ವೆಂಕಟೇಶನ್(ಮದುರೈ) ಅವರು, ಇದು ಸಾಂವಿಧಾನಿಕ ಅಧಿಕಾರವನ್ನು ಹೊರಗುತ್ತಿಗೆ ನೀಡುವುದರ ಸಂಭಾವ್ಯ ಮುನ್ಸೂಚನೆಯಾಗಿದ್ದು, ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಸಿಎಜಿ ಈ ವರ್ಷದ ಜುಲೈ ಮತ್ತು ಮಾರ್ಚ್ 2027ರ ನಡುವಿನ ಅವಧಿಗೆ ಸ್ವಾಯತ್ತ ಮತ್ತು ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆ ನಡೆಸಲು ಮೇ 27ರಂದು ಸಿಎ ಸಂಸ್ಥೆಗಳಿಂದ ಜೂ.5ರೊಳಗೆ ‘ಆಸಕ್ತಿ ಅಭಿವ್ಯಕ್ತಿ’ಯನ್ನು ಆಹ್ವಾನಿಸಿತ್ತು. ಪ್ರಸ್ತುತ ಸಿಎ ಸಂಸ್ಥೆಗಳನ್ನು ಕಂಪೆನಿ ಕಾಯ್ದೆಯ ಸಂಬಂಧಿತ ನಿಬಂಧನೆಗಳಡಿ ಸಾರ್ವಜನಿಕ ವಲಯದ ಉದ್ಯಮ(ಪಿಎಸ್ಯು)ಗಳ ಪ್ರಾಥಮಿಕ ಲೆಕ್ಕಪರಿಶೋಧನೆಗಾಗಿ ನಿಯೋಜಿಸಲಾಗಿದೆ.
ಸಿಎಜಿ ಕ್ರಮವನ್ನು ಆಕ್ಷೇಪಿಸಿ ಜೂ.3ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರವನ್ನು ಬರೆದಿರುವ ಸಂಸದ ವೆಂಕಟೇಶನ್, ಇದು ಸಿಎಜಿಯ ಸ್ವಾತಂತ್ರ್ಯವನ್ನು ಮತ್ತು ಸಾಂವಿಧಾನಿಕ ತತ್ವಗಳನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಅವರು ರಾಷ್ಟ್ರಪತಿಗಳನ್ನು ಕೋರಿಕೊಂಡಿದ್ದಾರೆ.
ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಯನ್ನು ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ(ಐಎಎಡಿ)ಯ ಅಧಿಕಾರಿಗಳು ನಡೆಸುತ್ತಾರೆ.
ಸಿಎಜಿಯ ಅಧಿಕಾರಿಗಳು ಈ ಸಂಸ್ಥೆಗಳ ಲೆಕ್ಕಪರಿಶೋಧನೆಯಲ್ಲಿ ಪರಿಣತಿಯನ್ನು ಹೊಂದಿದ್ದಾರೆ ಮತ್ತು ಸಿಎಜಿ ಹಾಗೂ ಅದರ ಲೆಕ್ಕಪರಿಶೋಧನೆ ವಿಭಾಗವನ್ನು ಭಾರತೀಯರ ಆರ್ಥಿಕ ಹಿತಾಸಕ್ತಿಗಳ ರಕ್ಷಕರು ಎಂದು ಹೇಳಿದರೆ ಅದು ಉತ್ಪ್ರೇಕ್ಷೆಯಾಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿರುವ ವೆಂಕಟೇಶನ್, ಈ ಸಂಸ್ಥೆಗಳು ಹೊಂದಿರುವ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಗಳು ಖಾಸಗಿಯವರ ಕೈಗಳಿಗೆ ಸಿಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ಅಖಿಲ ಭಾರತ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಅಧಿಕಾರಿಗಳ ಸಂಘದ ಮಹಾ ಕಾರ್ಯದರ್ಶಿ ಒ.ಎಸ್.ಸುಧಾಕರನ್ ಅವರು ಸಿಎಜಿ ಕೆ.ಸಂಜಯ ಮೂರ್ತಿ ಅವರಿಗೆ ಬರೆದಿರುವ ಪತ್ರದಲ್ಲಿ ಮಹಾಲೇಖಪಾಲರು ಮಾಡಬೇಕಾದ ಕೆಲಸಗಳಿಗೆ ಸಿಎಗಳು ಮತ್ತು ಆರ್ಟಿಕಲ್ ಕ್ಲಾರ್ಕ್ಗಳನ್ನು ನೇಮಕ ಮಾಡಿಕೊಳ್ಳುವುದಕ್ಕೆ ಬಲವಾದ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ಅಸಮಂಜಸವಾಗಿದೆ ಮತ್ತು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಸಿಎಜಿ ಕಚೇರಿಯು ಸಿಬ್ಬಂದಿಗಳ ತೀವ್ರ ಕೊರತೆಯನ್ನು ಎದುರಿಸುತ್ತಿರುವಾಗ ಸ್ವಾಯತ್ತ ಮತ್ತು ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಯಲ್ಲಿ ವಿಳಂಬವನ್ನು ಸಂಸದೀಯ ಸಮಿತಿಯು ಟೀಕಿಸಿರುವುದು ಹೊರಗುತ್ತಿಗೆ ನೀಡುವ ಹೊಸ ಕ್ರಮಕ್ಕೆ ಕಾರಣವಾಗಿರುವಂತೆ ತೋರುತ್ತದೆ ಎಂದು ಬಲ್ಲ ಮೂಲಗಳು ತಿಳಿಸಿವೆ.







