ಅತ್ಯಾಚಾರ ಆರೋಪ: ಬರೋಡಾ ಕ್ರಿಕೆಟಿಗ ಶಿವಾಲಿಕ್ ಶರ್ಮ ಬಂಧನ

PHOTO | instagram.com/shivaliksharma28/
ವಡೋದರ: ದೇಶೀಯ ಕ್ರಿಕೆಟ್ ನಲ್ಲಿ ಬರೋಡಾ ತಂಡವನ್ನು ಪ್ರತಿನಿಧಿಸುವ 26 ವರ್ಷದ ಕ್ರಿಕೆಟ್ ಆಟಗಾರ ಶಿವಾಲಿಕ್ ಶರ್ಮನನ್ನು ಅತ್ಯಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ. NDTV ರಾಜಸ್ಥಾನ ಸುದ್ದಿ ಸಂಸ್ಥೆಯ ಪ್ರಕಾರ, ಎಡಗೈ ಬ್ಯಾಟರ್ ಶಿವಾಲಿಕ್ ಶರ್ಮನನ್ನು ರಾಜಸ್ಥಾನ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಅತ್ಯಾಚಾರ ಆರೋಪದ ಸಂಬಂಧ, ಜೋಧ್ ಪುರ್ ನ ಭಗಸ್ತಾನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ ಶಿವಾಲಿಕ್ ಶರ್ಮನನ್ನು ಬಂಧಿಸಲಾಗಿದೆ. ಪೊಲೀಸರು ಆತನನ್ನು ತನಿಖೆಗೊಳಪಡಿಸಿದ ನಂತರ, ನ್ಯಾಯಾಲಯದೆದುರು ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ನನ್ನನ್ನು ವಿವಾಹವಾಗುತ್ತೇನೆ ಎಂದು ಭರವಸೆ ನೀಡಿದ್ದ ಶಿವಾಲಿಕ್ ಶರ್ಮ, ನನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ನೀಡಿರುವ ದೂರನ್ನು ಆಧರಿಸಿ, ಆತನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಫೆಬ್ರವರಿ 2023ರಲ್ಲಿ ವಡೋದರಕ್ಕೆ ಪ್ರವಾಸ ಕೈಗೊಂಡಿದ್ದಾಗ, ನಿಕಟ ಸಂಪರ್ಕಕ್ಕೆ ಬಂದಿದ್ದ ಶಿವಾಲಿಕ್ ಶರ್ಮ ಹಾಗೂ ದೂರುದಾರ ಮಹಿಳೆಯು, ಫೋನ್ ಮೂಲಕ ನಿಯಮಿತ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇದರ ಬೆನ್ನಿಗೇ, ಎರಡೂ ಕುಟುಂಬಗಳ ಸದಸ್ಯರು ಪರಸ್ಪರ ಭೇಟಿಯಾಗಿ, ಅವರಿಬ್ಬರ ನಡುವೆ ನಿಶ್ಚಿತಾರ್ಥವೇರ್ಪಡಿಸಲು ಒಪ್ಪಿಕೊಂಡಿದ್ದರು. ನಂತರ, ಆಗಸ್ಟ್ 2023ರಲ್ಲಿ ಶಿವಾಲಿಕ್ ಶರ್ಮನ ಪೋಷಕರು ಜೋಧ್ ಪುರ್ ಗೆ ಭೇಟಿ ನೀಡಿದ್ದಾಗ, ಶಿವಾಲಿಕ್ ಶರ್ಮ ಹಾಗೂ ದೂರುದಾರ ಮಹಿಳೆಯ ನಡುವೆ ಅಧಿಕೃತವಾಗಿ ನಿಶ್ಚಿತಾರ್ಥವೇರ್ಪಟ್ಟಿತ್ತು ಎಂದು ಹೇಳಲಾಗಿದೆ.
ನಿಶ್ಚಿತಾರ್ಥದ ನಂತರ, ಜೋಧ್ ಪುರ್ ಗೆ ಮರಳಿದ್ದ ಶಿವಾಲಿಕ್ ಶರ್ಮ, ದೂರುದಾರ ಮಹಿಳೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೆ, ಈ ಜೋಡಿ ರಾಜಸ್ಥಾನದ ವಿವಿಧ ಸ್ಥಳಗಳಿಗೆ ಒಟ್ಟಾಗಿ ಪ್ರವಾಸವನ್ನೂ ಕೈಗೊಂಡಿತ್ತು ಎನ್ನಲಾಗಿದೆ. ಆದರೆ, 2024ರಲ್ಲಿ ದೂರುದಾರ ಮಹಿಳೆಯು ವಡೋದರಗೆ ಭೇಟಿ ನೀಡಿದ್ದಾಗ, ಶಿವಾಲಿಕ್ ಶರ್ಮ ಕ್ರಿಕೆಟಿಗನಾಗಿರುವುದರಿಂದ, ನಾವು ಬೇರೆ ವೈವಾಹಿಕ ಪ್ರಸ್ತಾವಗಳನ್ನು ಪರಿಗಣಿಸುತ್ತಿದ್ದೇವೆ ಎಂದು ಆಕೆಗೆ ಹೇಳಿದ್ದ ಆತನ ಪೋಷಕರು, ಆ ಮೂಲಕ ನಿಶ್ಚಿತಾರ್ಥವನ್ನು ರದ್ದುಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದಾದ ನಂತರ, ಸಂತ್ರಸ್ತ ಮಹಿಳೆಯು ಪೊಲೀಸರಿಗೆ ಅಧಿಕೃತ ದೂರು ದಾಖಲಿಸಿದ್ದಾರೆ.
ದೂರುದಾರ ಮಹಿಳೆಯ ವೈದ್ಯಕೀಯ ಪರೀಕ್ಷೆ ಹಾಗೂ ನ್ಯಾಯಾಲಯದ ಹೇಳಿಕೆ ಸೇರಿದಂತೆ ಎಲ್ಲ ಅಗತ್ಯ ಕಾನೂನಾತ್ಮಕ ವಿಧಾನಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ನಡುವೆ ಬಂಧನದಿಂದ ತಪ್ಪಿಸಿಕೊಳ್ಳಲು ತಲೆ ಮರೆಸಿಕೊಂಡಿದ್ದ ಶಿವಾಲಿಕ್ ಶರ್ಮನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಥಮ ದರ್ಜೆಯ ಕ್ರಿಕೆಟ್ ಆಟಗಾರನಾದ ಶಿವಾಲಿಕ್ ಶರ್ಮ, ಇಲ್ಲಿಯವರೆಗೆ 18 ಪ್ರಥಮ ದರ್ಜೆ ಪಂದ್ಯಗಳು, 13 ಲಿಸ್ಟ್ ಎ ಪಂದ್ಯಗಳು ಹಾಗೂ 19 ಟಿ-20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 1087, 322 ಹಾಗೂ 349 ರನ್ ಗಳನ್ನು ಗಳಿಸಿದ್ದಾನೆ. ಈ ಹಿಂದೆ ಆತ ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸದಸ್ಯನೂ ಆಗಿದ್ದನು.







