ಪಶ್ಚಿಮ ಬಂಗಾಳ | ಕ್ರಿಮಿನಲ್ ಗಳು, ಭ್ರಷ್ಟಾಚಾರಿಗಳು ಜೈಲಿನಲ್ಲಿರಬೇಕೇ ಹೊರತು ಅಧಿಕಾರದಲ್ಲಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Photo : indiatoday
ಹೊಸದಿಲ್ಲಿ: “ಕ್ರಿಮಿನಲ್ ಗಳು, ಭ್ರಷ್ಟಾಚಾರಿಗಳು ಜೈಲಿನಲ್ಲಿರಬೇಕೇ ಹೊರತು ಅಧಿಕಾರದಲ್ಲಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಶುಕ್ರವಾರ ಕೋಲ್ಕತ್ತಾದಲ್ಲಿ ಮೂರು ಮೆಟ್ರೊ ಮಾರ್ಗಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, “ಒಂದು ವೇಳೆ ಪ್ರಧಾನಿ ಅಥವಾ ಮುಖ್ಯಮಂತ್ರಿ ಜೈಲಿನಲ್ಲಿದ್ದರೆ, ಅವರನ್ನು ವಜಾಗೊಳಿಸುವ ಯಾವುದೇ ಅವಕಾಶ ಸಂವಿಧಾನದಲ್ಲಿಲ್ಲ. ನಾಚಿಕೆಗೇಡಿನ ವ್ಯಕ್ತಿಗಳು ಜೈಲಿನಿಂದಲೇ ಸರಕಾರಗಳನ್ನು ನಡೆಸುತ್ತಿರುವುದನ್ನು ನೋಡಿ. ಟಿಎಂಸಿ ಸಚಿವರೊಬ್ಬರು ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜೈಲಿನಲ್ಲಿದ್ದರೂ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿಲ್ಲ” ಎಂದು ಪಶ್ಚಿಮ ಬಂಗಾಳದ ತಿದ್ದುಪಡಿ ಸೇವೆಗಳ ಸಚಿವ ಚಂದ್ರಕಾಂತ್ ಸಿನ್ಹಾರನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
ಚಂದ್ರಕಾಂತ್ ಸಿನ್ಹಾರವರು ಶಿಕ್ಷಕರ ನೇಮಕಾತಿ ಹಗರಣ ಆರೋಪದಲ್ಲಿ ಜೈಲಿನಲ್ಲಿದ್ದಾರೆ.
ಕೇಂದ್ರ ಸರಕಾರವು ಸಂಸತ್ತಿನಲ್ಲಿ ಮಂಡಿಸಿರುವ ಗಂಭೀರ ಆರೋಪಗಳಡಿ 30 ದಿನಗಳಿಗಿಂತ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಅವರ ಸ್ಥಾನಗಳಿಂದ ವಜಾಗೊಳಿಸುವ ಮಸೂದೆಯನ್ನು ತೃಣಮೂಲ ಕಾಂಗ್ರೆಸ್ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯಿಂದ ಈ ಹೇಳಿಕೆ ಹೊರ ಬಿದ್ದಿದೆ.
ಚುನಾವಣಾ ರಾಜ್ಯವಾದ ಬಿಹಾರದಲ್ಲೂ ಕೂಡಾ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ಆರ್ಜೆಡಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.
ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯುವ ಮಸೂದೆಯನ್ನು ಸಮರ್ಥಿಸಿಕೊಂಡ ಪ್ರಧಾನಿ ಮೋದಿ, “ಯಾರೂ ಕೂಡಾ ಜೈಲಿನಿಂದ ಆದೇಶ ನೀಡಕೂಡದು” ಎಂದು ಅಭಿಪ್ರಾಯ ಪಟ್ಟರು. ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಅವರು, ಜನರನ್ನು ಕೇವಲ ಮತ ಬ್ಯಾಂಕ್ ಆಗಿ ಪರಿಗಣಿಸಿರುವ ರಾಜಕೀಯ ಪಕ್ಷಗಳು, ಅವರ ಆಕಾಂಕ್ಷೆಗಳು, ಘನತೆ ಹಾಗೂ ಅಭಿವೃದ್ಧಿಯನ್ನು ಮರೆತಿವೆ ಎಂದು ಆರೋಪಿಸಿದರು.







