ಕೋಟ್ಯಂತರ ಬಡವರು ಇನ್ನೂ ಆಹಾರ ಸುರಕ್ಷತಾ ಕಾಯ್ದೆಯ ವ್ಯಾಪ್ತಿಗೊಳಪಟ್ಟಿಲ್ಲ: ಸಂಸದೀಯ ಸಮಿತಿಗೆ ಆಹಾರ ಸಚಿವಾಲಯದ ಮಾಹಿತಿ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಜನಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ ಮುಂದಿನ ಜನಗಣತಿಯವರೆಗೆ ಉಚಿತ ಮಾಸಿಕ ಪಡಿತರಗಳನ್ನು ಪಡೆಯುತ್ತಿರುವವರ ಪಟ್ಟಿಗೆ ಇನ್ನಷ್ಟು ಫಲಾನುಭವಿಗಳನ್ನು ಸೇರಿಸಲು ಸಾಧ್ಯವಿಲ್ಲ ಎಂದು ಸರಕಾರವು ಆಹಾರ ಮತ್ತು ನಾಗರಿಕ ಪೂರೈಕೆ ಕುರಿತ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದ್ದು, ಇದು ಬಡತನದಿಂದ ಬಳಲುತ್ತಿರುವ ಅನೇಕ ಕುಟುಂಬಗಳು ಇನ್ನೂ ಆಹಾರ ಸುರಕ್ಷತಾ ಕಾಯ್ದೆಯ ವ್ಯಾಪ್ತಿಯಿಂದ ಹೊರಗುಳಿದಿವೆ ಎನ್ನುವುದನ್ನು ಸೂಚಿಸಿದೆ ಎಂದು hindustantimes.com ವರದಿ ಮಾಡಿದೆ.
ಸಮಿತಿಯ ಪ್ರಶ್ನೆಗಳಿಗೆ ಉತ್ತರಿಸಿರುವ ಆಹಾರ ಸಚಿವಾಲಯವು, 2011ರ ಜನಗಣತಿಯ ಅಂಕಿಅಂಶಗಳ ಆಧಾರದಲ್ಲಿ ಅರ್ಹರಾಗಿದ್ದರೂ ವಿವಿಧ ಕಾರಣಗಳಿಂದಾಗಿ ಸುಮಾರು 79 ಲಕ್ಷ ಜನರು ಈಗಲೂ ಸಾರ್ವಜನಿಕ ಪೂರೈಕೆ ವ್ಯವಸ್ಥೆ (ಪಿಡಿಎಸ್)ಯಿಂದ ಹೊರಗುಳಿದಿದ್ದಾರೆ ಎಂದು ತಿಳಿಸಿದೆ.
ದೇಶದ ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನದಲ್ಲಿ ಸಮಸ್ಯೆಗಳ ಕುರಿತು ಸಮಿತಿಯ ಪ್ರಶ್ನೆಗೆ ಸಚಿವಾಲಯವು,ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್ಎಫ್ಎಸ್ಎ)ಯ ಅನುಷ್ಠಾನದ ಸಮಯದಲ್ಲಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಒಳಗೊಳ್ಳುವಿಕೆಯನ್ನು ನಿರ್ಧರಿಸಲು 2011ರ ಜನಗಣತಿಯ ಇತ್ತೀಚಿನ ಪ್ರಕಟಿತ ಅಂಕಿಅಂಶಗಳನ್ನು ಬಳಸಲಾಗಿತ್ತು. ಹೀಗಾಗಿ ಮುಂದಿನ ಜನಗಣತಿಯ ಸಂಬಂಧಿತ ದತ್ತಾಂಶಗಳ ಪ್ರಕಟಣೆಯ ಬಳಿಕವೇ ಎನ್ಎಫ್ಎಸ್ಎ ಅಡಿ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದೇ ಪರಿಷ್ಕರಣೆ ಸಾಧ್ಯವಾಗುತ್ತದೆ ಎಂದು ಉತ್ತರಿಸಿದೆ.
ಬಡವರಿಗೆ ಪಡಿತರವನ್ನು ಒದಗಿಸುವ ಎನ್ಎಫ್ಎಸ್ಎ, 2013 ಶೇ.75ರಷ್ಟು ಗ್ರಾಮೀಣ ಜನಸಂಖ್ಯೆ ಮತ್ತು ಶೇ.50ರಷ್ಟು ನಗರ ನಿವಾಸಿಗಳನ್ನು ಪಿಡಿಎಸ್ ವ್ಯಾಪ್ತಿಗೊಳಪಡಿಸುವುದನ್ನು ಕಡ್ಡಾಯಗೊಳಿಸಿದ್ದು,ಹಿಂದಿನ ಜನಗಣತಿಯಂತೆ ಇಂತಹವರ ಒಟ್ಟು ಸಂಖ್ಯೆ 81.35 ಕೋಟಿಗಳಷ್ಟಾಗುತ್ತದೆ.
ಪ್ರಸ್ತುತ 81.35 ಕೋಟಿ ಜನರ ಬದಲು ಕೇವಲ 80.56 ಕೋಟಿ ಜನರು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿದ್ದಾರೆ. ಆದರೂ ಇನ್ನೂ 79 ಲಕ್ಷ ಫಲಾನುಭವಿಗಳನ್ನು ಗುರುತಿಸಲು ಅವಕಾಶವಿದೆ ಎಂದು ಸಚಿವಾಲಯವು ಸಮಿತಿಗೆ ತಿಳಿಸಿದೆ.
ಸಮಿತಿಯು ಅನುದಾನಗಳ ಬೇಡಿಕೆ ಕುರಿತು ತನ್ನ ಎಂಟನೇ ವರದಿಯನ್ನು ಬುಧವಾರ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿದೆ.
ಆಹಾರ ಭದ್ರತಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಮತ್ತು ಏಕರೂಪವಾಗಿ ಜಾರಿಗೆ ತರಲಾಗುತ್ತಿದೆ ಹಾಗೂ ಪಿಡಿಎಸ್ ಅನ್ನು ಬಲಪಡಿಸಲು ಸರಕಾರವು ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ ಎಂಬ ಮಾಹಿತಿಯನ್ನು ತನಗೆ ಒದಗಿಸಲಾಗಿದ್ದು,ಇದು ತನಗೆ ತೃಪ್ತಿ ನೀಡಿದೆ ಎಂದು ಸಂಸದೀಯ ಸ್ಥಾಯಿ ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.
ಎಪ್ರಿಲ್ 2020 ಮತ್ತು ಡಿಸೆಂಬರ್ 2022ರ ನಡುವಿನ 28 ತಿಂಗಳುಗಳ ಅವಧಿಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಸುಮಾರು 3.91 ಲಕ್ಷ ಕೋಟಿ ರೂ.ವೆಚ್ಚದಲ್ಲಿ ಸುಮಾರು 11.18 ಕೋಟಿ ಟನ್ ಉಚಿತ ಆಹಾರ ಧಾನ್ಯಗಳನ್ನು ವಿತರರಿಸಲಾಗಿದೆ ಎಂದು ಆಹಾರ ಸಚಿವಾಲಯವು ಸಮಿತಿಗೆ ತಿಳಿಸಿದೆ.







