ಸಿಆರ್ಪಿಎಫ್ ಶಿಬಿರದ ಮೇಲೆ ದಾಳಿ ಪ್ರಕರಣ: ಮರಣದಂಡನೆಗೆ ಗುರಿಯಾಗಿದ್ದ ನಾಲ್ವರ ದೋಷಮುಕ್ತಿ

ಅಲಹಾಬಾದ್ ಹೈಕೋರ್ಟ್ PC: x.com/ABPNews
ಪ್ರಯಾಗ್ರಾಜ್/ ಮೀರಠ್: ಉತ್ತರ ಪ್ರದೇಶದ ರಾಮಪುರ ಸಿಆರ್ಪಿಎಫ್ ಶಿಬಿರದ ಮೇಲೆ 2007ರಲ್ಲಿ ದಾಳಿ ನಡೆಸಿ ಎಂಟು ಮಂದಿಯ ಸಾವಿಗೆ ಕಾರಣರಾದ ಆರೋಪದಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ ನಾಲ್ವರನ್ನು ಅಲಹಾಬಾದ್ ಹೈಕೋರ್ಟ್ ಖುಲಾಸೆ ಮಾಡಿದೆ. ದೋಷಮುಕ್ತಿಗೊಂಡವರಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳೂ ಸೇರಿದ್ದಾರೆ. ಆದರೆ ಶಸ್ತ್ರಾಸ್ತ್ರ ಕಾಯ್ದೆಯಡಿ ನಾಲ್ವರಿಗೆ ನ್ಯಾಯಪೀಠ ಶಿಕ್ಷೆ ವಿಧಿಸಿದೆ.
ಹೈಕೋರ್ಟ್ ತೀರ್ಪಿನ ಬಗ್ಗೆ ಮೃತ ಸಿಆರ್ಪಿಎಫ್ ಯೋಧರೊಬ್ಬರ ಕುಟಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಹಲವು ಮಂದಿ ಭದ್ರತಾ ಸಿಬ್ಬಂದಿಯನ್ನು ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ಮೂಲಕ ಹತ್ಯೆ ಮಾಡಿದ ಆರೋಪಿಗಳನ್ನು ಹೇಗೆ ದೋಷಮುಕ್ತಗೊಳಿಸಲು ಸಾಧ್ಯ? ನಂಬುವುದು ಅಸಾಧ್ಯ. ನಾನು ತಂದೆಯನ್ನ ಕಳೆದುಕೊಂಡಿದ್ದೇನೆ ಹಾಗೂ ಈಗ ಹಂತಕರು ದೋಷಮುಕ್ತರಾಗಿದ್ದಾರೆ. ಇದು ನ್ಯಾಯವೇ?" ಎಂದು 26 ವರ್ಷದ ದೀಪಾ ಚೌಧರಿ ಪ್ರಶ್ನಿಸಿದ್ದಾರೆ.
"ತರಬೇತಿ ಪಡೆದ ಪೊಲೀಸರು ತನಿಖೆ ನಡೆಸಿ ಅಭಿಯೋಜಕರು ಅನುಭವಿಗಳಾಗಿದ್ದರೆ ಈ ಪ್ರಕರಣದ ಫಲಿತಾಂಶ ಬೇರೆಯಾಗುತ್ತಿತ್ತು" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಆರೋಪವನ್ನು ಸಾಬೀತುಪಡಿಸುವಲ್ಲಿ ಅಭಿಯೋಜಕರು ವಿಫಲರಾಗಿರುವುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.
2007ರ ಡಿಸೆಂಬರ್ 31ರಂದು ರಾತ್ರಿ ಸಿಆರ್ಪಿಎಫ್ ಶಿಬಿರದ ಮೇಲೆ ನಡೆದ ದಾಳಿಯ ಅಗಾಧತೆಯನ್ನು ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ರಾಮ ಮನೋಹರ ನಾರಾಯಣ ಮಿಶ್ರಾ ದೃಢಪಡಿಸಿದ್ದಾರೆ. ಆದರೆ 2019ರಲ್ಲಿ ವಿಚಾರಣಾ ನ್ಯಾಯಾಲಯ ಮೊಹ್ಮದ್ ಶರೀಫ್, ಸಹಾಬುದ್ದೀನ್, ಇಮ್ರಾನ್ ಶಹಜಾದ್ ಮತ್ತು ಮೊಹ್ಮದ್ ಫಾರೂಕ್ ಅವರಿಗೆ ಭಾರತೀಯ ದಂಡಸಂಹಿತೆಯ ಸೆಕ್ಷನ್ 302 ಮತ್ತು 149ರ ಅಡಿಯಲ್ಲಿ ವಿಧಿಸಿದ್ದ ಮರಣ ದಂಡನೆಯನ್ನು ಅಭಿಯೋಜಕರ ವೈಫಲ್ಯದಿಂದಾಗಿ ರದ್ದುಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.







