ಮಣಿಪುರ | ಕಾರ್ಯಾಚರಣೆಯ ಪರಾಮರ್ಶೆ ನಡೆಸಿದ ಸಿಆರ್ಪಿಎಫ್ ಡಿಜಿ

Photo Credit: X/@crpfindia
ಹೊಸದಿಲ್ಲಿ/ಇಂಫಾಲ: ಕೇಂದ್ರ ಮೀಸಲು ಪೊಲೀಸ್ ಪಡೆಯ ಮಹಾ ನಿರ್ದೇಶಕ ಗ್ಯಾನೇಂದ್ರ ಪ್ರತಾಪ್ ಸಿಂಗ್ ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ಭದ್ರತಾ ಪಡೆಯ ವ್ಯೂಹಾತ್ಮಕ ಪರಾಮರ್ಶೆ ನಡೆಸಿದರು. ಈ ವೇಳೆ ಅವರು ಭದ್ರತಾ ಪಡೆಯ ಯೋಧನೊಬ್ಬ ತನ್ನ ಇಬ್ಬರು ಸಹೋದ್ಯೋಗಿಗಳಿಗೆ ಗುಂಡಿಕ್ಕಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ಶಿಬಿರ ಸೇರಿದಂತೆ ವಿವಿಧ ಅರೆ ಸೇನಾಪಡೆಯ ಘಟಕಗಳಿಗೆ ಭೇಟಿ ನೀಡಿದ್ದರು ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ರಾಷ್ಟ್ರಪತಿ ಆಡಳಿತ ಜಾರಿಯಾಗಿರುವ ಮಣಿಪುರಕ್ಕೆ ಸಿಆರ್ಪಿಎಫ್ ಮಹಾ ನಿರ್ದೇಶಕರು ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಫೆಬ್ರವರಿ 13ರಂದು ಯೋಧನೊಬ್ಬ ತನ್ನ ಸಹೋದ್ಯೋಗಿಗಳನ್ನೇ ಹತ್ಯೆಗೈದಿದ್ದ ಘಟನೆ ನಡೆದಿದ್ದ ಪಶ್ಚಿಮ ಇಂಫಾಲ ಜಿಲ್ಲೆಯಲ್ಲಿರುವ ಲಾಮ್ಸಾಂಗ್ ಶಿಬಿರದ 120ನೇ ಬೆಟಾಲಿಯನ್ ಗೆ ಬುಧವಾರ ಸಿಆರ್ಪಿಎಫ್ ಮಹಾ ನಿರ್ದೇಶಕ ಗ್ಯಾನೇಂದ್ರ ಪ್ರತಾಪ್ ಸಿಂಗ್ ಭೇಟಿ ನೀಡಿದ್ದರು.
“ಶಿಬಿರದಲ್ಲಿ ಸೇನಾ ಪಡೆಗಳು ಜಾಗ್ರತೆ, ಪರಸ್ಪರ ನೆರವು ಹಾಗೂ ತಮ್ಮ ಉತ್ಸಾಹವನ್ನು ಉಚ್ಛ್ರಾಯ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಯೋಧರ ಕಾರ್ಯಾಚರಣೆ ಹಾಗೂ ವೈಯಕ್ತಿಕ ಅಗತ್ಯಗಳಿಗೆ ಸಿಬ್ಬಂದಿಗಳು ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ಅವರು ಭರವಸೆ ನೀಡಿದರು” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭದ್ರತಾ ಪಡೆಗಳ ಯೋಧರು ಗುಂಡಿನ ದಾಳಿಯಲ್ಲಿ ಗಾಯಗೊಂಡು, ಚಿಕಿತ್ಸೆಗೆ ದಾಖಲಾಗಿರುವ ಇಂಫಾಲದಲ್ಲಿನ ಪ್ರಾಂತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(RIMS)ಗೂ ಅವರು ಭೇಟಿ ನೀಡಿದ್ದರು. ಚಿಕಿತ್ಸೆ ಪಡೆಯುತ್ತಿರುವ ಸಿಆರ್ಪಿಎಫ್ ಯೋಧರಿಗೆ ಶೀಘ್ರ ಚೇತರಿಸಿಕೊಳ್ಳಿ ಎಂದು ಹಾರೈಸಿದ ಅವರು, ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮಾತುಕತೆಯನ್ನು ನಡೆಸಿದರು ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಶಾಂತಿಯನ್ನು ಖಾತರಿಗೊಳಿಸಲು ಸಿಆರ್ಪಿಎಫ್ ಮಹಾ ನಿರ್ದೇಶಕ ಗ್ಯಾನೇಂದ್ರ ಪ್ರತಾಪ್ ಸಿಂಗ್, ಸಿಆರ್ಪಿಎಫ್ ಕಾರ್ಯಾಚರಣೆಯ ವ್ಯೂಹಾತ್ಮಕ ಪರಾಮರ್ಶೆಯನ್ನು ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.







