ಪಾಕ್ ಮಹಿಳೆ ಜೊತೆಗಿನ ವಿವಾಹವನ್ನು ಮುಚ್ಚಿಟ್ಟಿದ್ದ ಸಿಆರ್‌ಪಿಎಫ್ ಯೋಧನ ವಜಾ

ಹೊಸದಿಲ್ಲಿ: ಪಾಕಿಸ್ತಾನಿ ಮಹಿಳೆಯ ಜೊತೆಗಿನ ತನ್ನ ವಿವಾಹವನ್ನು ಮುಚ್ಚಿಟ್ಟಿದ್ದಕ್ಕಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಯೋಧನೊಬ್ಬನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
41ನೇ ಬಟಾಲಿಯನ್‌ನ ಯೋಧ ಮುನೀರ್ ಅಹ್ಮದ್ ವಜಾಗೊಂಡ ಸಿಆರ್‌ಪಿಎಫ್ ಯೋಧ. ಅವರು ಸಆರ್‌ಪಿಎಫ್‌ನ ಅನುಮತಿ ಪಡೆಯದೆ ಪಾಕ್ ಪ್ರಜೆಯಾದ ಮಿನಾಲ್ ಖಾನ್‌ಳನ್ನು ವಿವಾಹವಾಗಿದ್ದರು.
ತನ್ನ ಪತ್ನಿಯ ವೀಸಾ ಅವಧಿ ಮುಕ್ತಾಯಗೊಂಡಿರುವುದು ತಿಳಿದ ಬಳಿಕವೂ ಆಕೆಗೆ ಆಶ್ರಯ ನೀಡಿದ್ದ. ಆತನ ಕೃತ್ಯಗಳು ಸೇವಾ ನಡವಳಿಕೆಯ ಉಲ್ಲಂಘನೆಯಾಗಿದೆ ಹಾಗೂ ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವಾಗಿದೆಯೆಂದು ಸಿಆರ್‌ಪಿಎಫ್ ಹೇಳಿಕೆ ತಿಳಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಆನಂತರ ಭಾರತವು ಪಾಕಿಸ್ತಾನದ ವಿರುದ್ಧ ಕೈಗೊಂಡ ರಾಜತಾಂತ್ರಿಕ ನಿರ್ಬಂಧಗಳ ಭಾಗವಾಗಿ ಪಾಕ್ ಪ್ರಜೆಗಳು ದೇಶವನ್ನು ತೊರೆಯುವಂತೆ ಭಾರತವು ಆದೇಶಿಸಿತ್ತು. ಈ ಸಂದರ್ಭದಲ್ಲಿ ಪಾಕ್ ಮಹಿಳೆಯ ಜೊತೆ ಅಹ್ಮದ್ ವಿವಾಹವಾಗಿರುವುದು ಬೆಳಕಿಗೆ ಬಂದಿತ್ತು.
ಪಾಕಿಸ್ತಾನದ ಸಿಯಾಲ್‌ಕೋಟ್ ನಿವಾಸಿ ಮಿನಾಲ್ ಖಾನ್‌ಳನ್ನು ವಿವಾಹವಾಗಲು ಮುನೀರ್ 2023ರಲ್ಲಿ ಸಿಆರ್‌ಪಿಎಫ್‌ನಿಂದ ಅನುಮತಿ ಕೋರಿದ್ದ ಯೋಧ, ಮನವಿಗೆ ಅಧಿಕಾರಿಗಳು ಪ್ರತಿಕ್ರಿಯಿಸುವ ಮೊದಲೇ 2024ರ ಮೇ 24ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಆಕೆಯನ್ನು ವಿವಾಹವಾಗಿದ್ದರು.
ವಿವಾಹದ ಬಳಿಕ ಮಿನಾಲ್, ಸಂದರ್ಶನ ವೀಸಾದಡಿ ಭಾರತಕ್ಕೆ ಆಗಮಿಸಿದ್ದಳು ಮತ್ತು ಮುನೀರ್ ಜೊತೆ ವಾಸವಾಗಿದ್ದಳು. ಆಕೆಯ ವೀಸಾ ಅವಧಿ ಮುಕ್ತಾಯಗೊಂಡ ಆನಂತರವೂ ಆಕೆ ಭಾರತದಲ್ಲೇ ಉಳಿದುಕೊಂಡಿದ್ದಳು ಎಂದು ವರದಿಯಾಗಿದೆ.







