ಮನೆಗೆಲಸದ ಬಾಲಕಿಯ ಮೇಲೆ ದೈಹಿಕ ದೌರ್ಜನ್ಯ: CRPF ಅಧಿಕಾರಿ, ಪತ್ನಿ ಬಂಧನ

ಸಾಂದರ್ಭಿಕ ಚಿತ್ರ | Photo Credit : freepik
ನೊಯ್ಡಾ (ಉತ್ತರ ಪ್ರದೇಶ): ಗ್ರೇಟರ್ ನೊಯ್ಡಾದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ 10 ವರ್ಷದ ಮನೆಗೆಲಸದ ಬಾಲಕಿಯ ಮೇಲೆ ದೈಹಿಕ ದೌರ್ಜನ್ಯ ನಡೆಸಿ, ಆಕೆ ಗಂಭೀರವಾಗಿ ಗಾಯಗೊಂಡು ವೆಂಟಿಲೇಟರ್ ನೆರವಿನಲ್ಲಿರುವಂತೆ ಮಾಡಿದ ಆರೋಪದ ಮೇಲೆ ಸೋಮವಾರ CRPF ಕಾನ್ಸ್ಟೇಬಲ್ ಹಾಗೂ ಆತನ ಪತ್ನಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 235ನೇ ಬೆಟಾಲಿಯನ್ ನ ಕಾನ್ಸ್ಟೇಬಲ್ ಜಿ.ಡಿ. ತಾರೀಕ್ ಅನ್ವರ್ ಹಾಗೂ ಆತನ ಪತ್ನಿ ರಿಂಪಾ ಖಾತುನ್ ಎಂದು ಗುರುತಿಸಲಾಗಿದೆ.
ಜಿ.ಡಿ. ತಾರೀಕ್ ಅನ್ವರ್ನ ಪತ್ನಿ ರಿಂಪಾ ಖಾತುನ್ ಅವರ ಸೋದರ ಸೊಸೆಯಾಗಿರುವ ಬಾಲಕಿ, ಅವರ ನಿವಾಸದಲ್ಲಿ ಮನೆಗೆಲಸದ ಬಾಲಕಿಯಾಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಹಿರಿಯ ಅಧಿಕಾರಿಗಳ ಅಧಿಕೃತ ಅನುಮತಿ ಇಲ್ಲದೆ ಆ ಬಾಲಕಿ CRPF ಕ್ಯಾಂಪಸ್ ನಲ್ಲಿ ದಂಪತಿಗಳೊಂದಿಗೆ ವಾಸಿಸುತ್ತಿದ್ದಳು ಹಾಗೂ ಆಕೆಯನ್ನು ಮನೆಗೆಲಸಕ್ಕಾಗಿ ನೇಮಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ CRPF ಶಿಬಿರದಲ್ಲಿ ಸುಬೇದಾರ್ ಮೇಜರ್ ಹುದ್ದೆಯಲ್ಲಿ ನಿಯೋಜನೆಯಲ್ಲಿರುವ ಒಬ್ಬ ಅಧಿಕಾರಿ ರವಿವಾರ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ದಂಪತಿಗಳ ವಿರುದ್ಧ ಇಕೊಟೆಕ್–3 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಂಪತಿಗಳು ಇಕೊಟೆಕ್–3 CRPF ಕ್ಯಾಂಪಸ್ ನೊಳಗಿನ 60ನೇ ಬ್ಲಾಕ್ನ 13ನೇ ಸಂಖ್ಯೆಯ ಕ್ವಾರ್ಟರ್ನಲ್ಲಿ ವಾಸಿಸುತ್ತಿದ್ದರು. ಸಂತ್ರಸ್ತ ಬಾಲಕಿಗೆ ದಿನನಿತ್ಯ ಇತರ ಮಕ್ಕಳ ಆರೈಕೆ ಸೇರಿದಂತೆ ಮನೆಗೆಲಸದ ಕೆಲಸಗಳನ್ನು ನೀಡಲಾಗುತ್ತಿತ್ತು. ಆಕೆಯನ್ನು ಪದೇಪದೇ ಥಳಿಸಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜನವರಿ 14ರ ಮಧ್ಯರಾತ್ರಿ ದಂಪತಿಗಳು ಬಾಲಕಿಯನ್ನು ಅಮಾನುಷವಾಗಿ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಬಳಿಕ ಆಕೆಯನ್ನು CRPF ಆಸ್ಪತ್ರೆಗೆ ದಾಖಲಿಸುವ ಬದಲು ಅನ್ವರ್ ಆಕೆಯನ್ನು ಸರ್ವೋದಯ ಆಸ್ಪತ್ರೆಗೆ ದಾಖಲಿಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬಾಲಕಿ ಶೌಚಾಲಯದಲ್ಲಿ ಜಾರಿ ಬಿದ್ದಳು ಎಂದು ಆತ ವೈದ್ಯರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ಬಾಲಕಿಯ ವೈದ್ಯಕೀಯ ಪರೀಕ್ಷೆಗಳು ಪೂರ್ಣಗೊಂಡಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.







