ಮಾವೋವಾದಿ ವಿರೋಧಿ ಕಾರ್ಯಾಚರಣೆಯ ವೇಳೆ ಸಿಡಿಲು ಬಡಿದು ಸಿಆರ್ಪಿಎಫ್ ಅಧಿಕಾರಿ ಮೃತ್ಯು

ಸಾಂದರ್ಭಿಕ ಚಿತ್ರ (PTI)
ರಾಂಚಿ: ಚೈಬಾಸಾದ ಸಾರಂಡಾ ಅರಣ್ಯದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಯ ವೇಳೆ ಸಿಡಿಲು ಬಡಿದು ಸಿಆರ್ಪಿಎಫ್ ಅಧಿಕಾರಿಯೋರ್ವರು ಮೃತಪಟ್ಟಿದ್ದಾರೆ.
26 ನೇ ಬೆಟಾಲಿಯನ್ನ ಎರಡನೇ ಕಮಾಂಡರ್ ಆಗಿದ್ದ ಅಧಿಕಾರಿ ಎಂ ಪ್ರಬೋ ಸಿಂಗ್ (46) ಅವರು ಮೃತರು. ಘಟನೆಯಲ್ಲಿ ಸಿಆರ್ಪಿಎಫ್ ಸಹಾಯಕ ಕಮಾಂಡೆಂಟ್ ಸುಬೀರ್ ಮಂಡಲ್ ಮತ್ತು ಜಾರ್ಖಂಡ್ ಜಾಗ್ವಾರ್ ಪಡೆಯ ಸಹಾಯಕ ಸಬ್-ಇನ್ಸ್ಪೆಕ್ಟರ್ಗಳಾದ ಸುದೇಶ್ ಮತ್ತು ಚಂದ್ಲಾಲ್ ಹನ್ಸ್ಡಾ ಗಾಯಗೊಂಡಿದ್ದಾರೆ.
ಗುರುವಾರ ಸಂಜೆ 5:30ರ ಸುಮಾರಿಗೆ ಭಾರೀ ಮಳೆಯಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದ ಎಂ ಪ್ರಬೋ ಸಿಂಗ್ ಅವರನ್ನು ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮಣಿಪುರ ನಿವಾಸಿಯಾಗಿರುವ ಪ್ರಬೋ ಸಿಂಗ್ ಅವರನ್ನು ಇತ್ತೀಚೆಗೆ ಜಾರ್ಖಂಡ್ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಇವರು ಚೈಬಾಸಾದ ಮಾವೋವಾದಿ ಪೀಡಿತ ಬಲಿವಾ ಅರಣ್ಯಗಳಲ್ಲಿ ಕಾರ್ಯಾಚರಣೆಯಲ್ಲಿ ಸಿಆರ್ಪಿಎಫ್ ಮತ್ತು ಜಾರ್ಖಂಡ್ ಪೊಲೀಸರ ಜಂಟಿ ತಂಡದ ಭಾಗವಾಗಿದ್ದರು.





