ಸಿಎಸ್ಡಿಎಸ್ - ಲೋಕನೀತಿ ಚುನಾವಣಾಪೂರ್ವ ಸಮೀಕ್ಷೆ | ಶ್ರೀಮಂತರಿಗಷ್ಟೇ ಅಭಿವೃದ್ಧಿಯ ಪ್ರಯೋಜನ ಲಭಿಸಿದೆ
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.32 ಮಂದಿಯ ಅನಿಸಿಕೆ

ಹೊಸದಿಲ್ಲಿ : ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲವೆಂದು ಪ್ರತಿ 10 ಮತದಾರರ ಪೈಕಿ ಇಬ್ಪರು ಭಾವಿಸಿದ್ದಾರೆಂದು ‘ಸಿಎಸ್ಡಿಎಸ್-ಲೋಕನೀತಿ 2024’ ಚುನಾವಣಾಪೂರ್ವ ಸಮೀಕ್ಷಾ ವರದಿ ಬಹಿರಂಗಪಡಿಸಿದೆ. ಶೇ.32 ಮಂದಿ ಮತದಾರರು, ಕಳೆದ ಐದು ವರ್ಷಗಳಲ್ಲಿ ಕೇವಲ ಶ್ರೀಮಂತರಷ್ಟೇ ಅಭಿವೃದ್ಧಿಯನ್ನು ಕಂಡಿದ್ದಾರೆ ಎಂದು ಭಾವಿಸಿರುವುದಾಗಿ ವರದಿ ತಿಳಿಸಿದೆ.
ದೇಶವನ್ನು ಅಭಿವೃದ್ಧಿಪಡಿಸಲು ನರೇಂದ್ರ ಮೋದಿಯವರು ಉತ್ತಮ ಎಂದು ಶೇ.30ರಷ್ಟು ಮತದಾರರು ಭಾವಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಂತೆ, ಈ ಸಲದ ಚುನಾವಣೆಯಲ್ಲೂ ಶೇ.14 ಮಂದಿ ಮತದಾರರು ಅಭಿವೃದ್ಧಿಯನ್ನು ಪ್ರಮುಖ ಚುನಾವಣಾ ವಿಷಯವಾಗಿ ಪರಿಗಣಿಸಿದ್ದಾರೆಂದು ವರದಿ ಗಮನಸೆಳೆದಿದೆ.
ಕಳೆದ ಐದು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲವೆಂದು ಪ್ರತಿ 10 ಮತದಾರರ ಪೈಕಿ ಇಬ್ಬರು ಅಭಿಪ್ರಾಯಿಸಿದ್ದಾರೆ. ಇನ್ನು ಶೇ.32 ಮಂದಿ ಮತದಾರರು, ಕಳೆದ ಐದು ವರ್ಷಗಳಲ್ಲಿ ಕೇವಲ ಶ್ರೀಮಂತರಷ್ಟೇ ಅಭಿವೃದ್ಧಿಯನ್ನು ಕಂಡಿದ್ದಾರೆ ಎಂದು ಭಾವಿಸಿರುವುದಾಗಿ ಸಿಎಸ್ಡಿಎಸ್-ಲೋಕನೀತಿ ಚುನಾವಣಾ ಪೂರ್ವ ಸಮೀಕ್ಷೆ ತಿಳಿಸಿದೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರದ ಆಡಳಿತವಿದ್ದಾಗಲೂ, ದೊಡ್ಡ ಸಂಖ್ಯೆಯ ಮತದಾರರು ಅಂದರೆ ಶೇ.43ರಷ್ಟು ಮಂದಿ, ಕೇಂದ್ರ ಸರಕಾರದ ಅಭಿವೃದ್ಧಿ ಉಪಕ್ರಮಗಳು ಪ್ರಾಥಮಿಕವಾಗಿ ಶ್ರೀಮಂತರಿಗಷ್ಟೇ ಪ್ರಯೋಜನಗಳನ್ನು ತಂದುಕೊಟ್ಟಿದೆಯೆಂದು ಅಭಿಪ್ರಾಯಿಸಿದ್ದರು. ಆದರೆ ಈ ಸಲದ ಸಮೀಕ್ಷೆಯಲ್ಲಿ ಎಲ್ಲರಿಗೂ ಸಮಾನವಾದ ರೀತಿಯಲ್ಲಿ ಅಭಿವೃದ್ಧಿಗಳು ಆಗಿದೆಯೆಂದು ಭಾವಿಸುವ ಮತದಾರರ ಪ್ರಮಾಣ ಶೇಕಡ 48 ಆಗಿದೆ. 2004ರಿಂದೀಚೆಗೆ ಆದಂತಹ ಅತ್ಯಂತ ಗಣನೀಯ ಏರಿಕೆ ಇದಾಗಿದೆ. ಆದರೆ ಪ್ರತಿ ಹತ್ತು ಮಂದಿಯಲ್ಲಿ ಕೇವಲ ಮೂವರು ಮಾತ್ರ (27 ಶೇ.) ಎಲ್ಲರಿಗೂ ಅಭಿವೃದ್ಧಿಯ ಪ್ರಯೋಜನ ದೊರೆತಿದೆ ಎಂದು ಭಾವಿಸಿದ್ದಾರೆ.
ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಳವಾಗಿದೆ ; ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.55 ಮಂದಿಯ ಆಭಿಮತ
ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಿದೆಯೆಂದು ಸಿಎಸ್ಡಿಎಸ್-ಲೋಕನೀತಿ 2024 ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಅರ್ಧಾಂಶಕ್ಕಿಂತಲೂ ಅಧಿಕ (ಶೇ.55)ಮಂದಿ ಹೇಳಿದ್ದಾರೆ. 2019ರ ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆಗೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಈಗ ಶೇ. 15ರಷ್ಟು ಹೆಚ್ಚಳವಾಗಿದೆ. ಖಂಡಿತವಾಗಿಯೂ ಇದು ಗಮನಾರ್ಹವಾದ ಏರಿಕೆಯೆಂದು ಸಮೀಕ್ಷಾ ವರದಿ ಅಭಿಪ್ರಾಯಿಸಿದೆ.
ಇದಕ್ಕೆ ವ್ಯತಿರಿಕ್ತವಾಗಿ ಭ್ರಷ್ಟಾಚಾರದ ಪ್ರಮಾಣದಲ್ಲಿ ಇಳಿಕೆಯಾಗಿದೆಯೆಂದು ಹೇಳುವವರ ಸಂಖ್ಯೆಯಲ್ಲಿ ಸುಮಾರು ಅರ್ಧಾಂಶದಷ್ಟು ಇಳಿಕೆಯಾಗಿದೆ (2019ರಲ್ಲಿ ಶೇ.19ರಷ್ಟಿದ್ದುದು, 2024ರಲ್ಲಿ ಶೇ.37ರಷ್ಟಾಗಿದೆ).
ಗ್ರಾಮಾಂತರ, ಪಟ್ಟಣ,ನಗರಗಳ ಭೇದವಿಲ್ಲದೆ ಭ್ರಷ್ಟಾಚಾರ ವ್ಯಾಪಕ
ಗ್ರಾಮ, ಪಟ್ಟಣ ಹಾಗೂ ನಗರ ಎಂಬ ಭೇದವಿಲ್ಲದೆ ಎಲ್ಲೆಡೆಯೂ ಭ್ರಷ್ಟಾಚಾರ ಸರಿಸಮಾನವಾಗಿ ಹರಡಿದೆ. ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರದಲ್ಲಿ ತೀವ್ರ ಹೆಚ್ಚಳವಾಗಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಹೆಚ್ಚಿನವರು ಹೇಳಿದ್ದಾರೆ. ಆಂದರೆ ಐದನೇ ಒಂದರಷ್ಟು ಮಂದಿ ಮಾತ್ರವೇ ಭ್ರಷ್ಟಾಚಾರದ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಭಾವಿಸಿದ್ದಾರೆ.
ಬಡವರು, ಶ್ರೀಮಂತರೆಂಬ ಭೇದವಿಲ್ಲದೆ ಭ್ರಷ್ಟಾಚಾರದಲ್ಲಿ ಹೆಚ್ಚಳವಾಗಿದೆಯೆಂದು ಭಾವಿಸಿದವರ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಪ್ರತಿ 10 ಮಂದಿ ಶ್ರೀಮಂತರು ಹಾಗೂ ಬಡವರ ಪೈಕಿ ಆರು ಮಂದಿ ಕಳೆದ ಹತ್ತು ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಳವಾಗಿದೆಯೆಂದು ಹೇಳಿದ್ದಾರೆ.
ಆದರೆ ಭ್ರಷ್ಟಾಚಾರ ಕಡಿಮೆಯಾಗಿದೆಯೆಂದು ಹೇಳಿದವರ ಪ್ರಮಾಣವು ಬಡವರಿಗಿಂತಲೂ ಶ್ರೀಮಂತರ (ಶೇ.7) ಪ್ರಮಾಣ ಅಧಿಕವಾಗಿದೆ.







