ಹಿಂಸಾಚಾರ ಪೀಡಿತ ಲೇಹ್ ನಲ್ಲಿ ಐದನೆಯ ದಿನವೂ ಕರ್ಫ್ಯೂ ಮುಂದುವರಿಕೆ

Photo credit: PTI
ಲೇಹ್: ಕಳೆದ ವಾರ ಹಿಂಸಾತ್ಮಕ ಪ್ರತಿಭಟನೆಗಳು ನಡೆದ ನಂತರ, ಸತತ ಐದನೆ ದಿನವಾದ ರವಿವಾರವೂ ಲೇಹ್ ನಲ್ಲಿ ಕರ್ಫ್ಯೂ ಮುಂದುವರಿದಿದೆ. ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸುವುದನ್ನು ನಿರ್ಧರಿಸಲು ಉನ್ನತ ಮಟ್ಟದ ಸಭೆಯನ್ನು ನಡೆಸಲು ಲೆಫ್ಟಿನೆಂಟ್ ಗವರ್ನರ್ ಸಿದ್ಧತೆ ನಡೆಸಿದ್ದು, ಕಟ್ಟುನಿಟ್ಟಿನ ಭದ್ರತೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ಲಡಾಖ್ ಗೆ ರಾಜ್ಯದ ಸ್ಥಾನಮಾನ ನೀಡಬೇಕು ಹಾಗೂ ಲಡಾಖ್ ಅನ್ನು ಸಂವಿಧಾನದ ಆರನೆಯ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಲೇಹ್ ಅಪೆಕ್ಸ್ ಸಂಘಟನೆ ನೀಡಿದ್ದ ಬಂದ್ ಕರೆಯ ವೇಳೆ ಹಿಂಸಾಚಾರ ನಡೆದಿತ್ತು.
ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಈ ಗಲಭೆಯ ಆರೋಪದ ಮೇಲೆ ಇಲ್ಲಿಯವರೆಗೆ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.
ಇದರ ಬೆನ್ನಿಗೇ, ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿರುವ ಪೊಲೀಸರು, ಅವರನ್ನು ಸದ್ಯ ರಾಜಸ್ಥಾನದ ಜೋಧಪುರ್ ಜೈಲಿಗೆ ಸ್ಥಳಾಂತರಿಸಿದ್ದಾರೆ.





