ಜಮ್ಮು ಕಾಶ್ಮೀರ | ಪೊಲೀಸರಿಂದಲೇ ಪೊಲೀಸ್ ಗೆ ಕಸ್ಟಡಿ ಹಿಂಸೆ!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಆ. 21: ಎರಡು ವರ್ಷಗಳ ಹಿಂದೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬರಿಗೆ ‘‘ಕಸ್ಟಡಿಯಲ್ಲಿ ಅಮಾನುಷ ಹಾಗೂ ಅಮಾನವೀಯ ಹಿಂಸೆ’’ ನೀಡಿರುವ ಆರೋಪದಲ್ಲಿ ತಾನು ಬಂಧಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ನ ಎಂಟು ಸಿಬ್ಬಂದಿಯನ್ನು ಪೊಲೀಸ್ ರಿಮಾಂಡ್ ಗೆ ಕೊಡಬೇಕೆಂದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯು ಶ್ರೀನಗರದ ವಿಶೇಷ ನ್ಯಾಯಾಲಯವನ್ನು ಕೋರಲಿದೆ.
ಮಾದಕವಸ್ತು ಮಾರಾಟಗಾರರಿಗೆ ಸಹಾಯ ಮಾಡಿದ ಸಂಶಯದಲ್ಲಿ ಈ ಆರೋಪಿ ಪೊಲೀಸರು ಕಾನ್ಸ್ಟೇಬಲ್ ಖುರ್ಷೀದ್ ಅಹ್ಮದ್ ಚೋಹನ್ರಿಗೆ ಆರು ದಿನಗಳ ಕಾಲ ಚಿತ್ರಹಿಂಸೆ ನೀಡಿದ ಪ್ರಕರಣ ಇದಾಗಿದೆ. ಎಂಟು ಆರೋಪಿ ಪೊಲೀಸ್ ಅಧಿಕಾರಿಗಳನ್ನು ಸುದೀರ್ಘವಾಗಿ ಪ್ರಶ್ನಿಸಿದ ಬಳಿಕ, ಬುಧವಾರ ರಾತ್ರಿ ಸಿಬಿಐ ತನ್ನ ಕಸ್ಟಡಿಗೆ ತೆಗೆದುಕೊಂಡಿತ್ತು. ಸಂತ್ರಸ್ತನಿಗೆ ನೀಡಿದ ಹಿಂಸೆಯಲ್ಲಿ ಪ್ರತಿಯೊಬ್ಬ ಆರೋಪಿಯ ಪಾತ್ರದ ಬಗ್ಗೆ ನಿರ್ಧರಿಸಲು ಅವರ ಕಸ್ಟಡಿ ವಿಚಾರಣೆಯ ಅಗತ್ಯವಿದೆ ಎಂದು ಸಿಬಿಐ ಹೇಳಿದೆ.
ಸುಪ್ರೀಂ ಕೋರ್ಟ್ನ ಆದೇಶದಂತೆ, ಸಿಬಿಐಯು ಉಪ ಪೊಲೀಸ್ ಸೂಪರಿಂಟೆಂಡೆಂಟ್ ಇಜಾಝ್ ಅಹ್ಮದ್ ನಾಕೊ ಮತ್ತು ಇತರ ಐವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದೆ. ಘಟನೆ ನಡೆದಾಗ ಅವರು ಕುಪ್ವಾರದ ಜಂಟಿ ತನಿಖಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಚೋಹನ್ ಗೆ ನೀಡಲಾಗಿದೆ ಎನ್ನಲಾದ ಅಮಾನವೀಯ ಹಿಂಸೆಯಲ್ಲಿ ಇನ್ನೂ ಇಬ್ಬರು ಪೊಲೀಸರು ಶಾಮೀಲಾಗಿದ್ದರು ಎನ್ನುವುದು ಸಿಬಿಐಯ ವಿಚಾರಣೆಯಲ್ಲಿ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಮಿನಲ್ ಪಿತೂರಿ, ಕೊಲೆಯತ್ನ ಮತ್ತು ಇತರ ಆರೋಪಗಳಲ್ಲಿ ಐಜಾಝ್ ಅಹ್ಮದ್ ನಾಕೊ ಮತ್ತು ಸಬ್ ಇನ್ಸ್ಪೆಕ್ಟರ್ ರಿಯಾಝ್ ಅಹ್ಮದ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ.
2023 ಫೆಬ್ರವರಿಯಲ್ಲಿ, ನಾಕೊ, ರಿಯಾಝ್ ಅಹ್ಮದ್ ಮತ್ತು ಇತರರು ಖುರ್ಷೀದ್ರಿಗೆ ಆರು ದಿನಗಳ ಹಿಂಸೆ ನೀಡಿದ್ದಾರೆ. ಆರೋಪಿಗಳು ಖುರ್ಷೀದ್ರಿಗೆ ಕಬ್ಬಿಣದ ಸಲಾಕೆಗಳು ಮತ್ತು ಮರದ ತುಂಡುಗಳಿಂದ ಹಲ್ಲೆ ಮಾಡಿದ್ದಾರೆ, ಅವರಿಗೆ ವಿದ್ಯುತ್ ಶಾಕ್ ನೀಡಿದ್ದಾರೆ ಮತ್ತು ಅವರ ಜನನಾಂಗವನ್ನು ವಿರೂಪಗೊಳಿಸಿದ್ದಾರೆ ಎಂದು ಅವರ ಪತ್ನಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.







