2024ರಲ್ಲಿ ಸೈಬರ್ ವಂಚನೆಯಿಂದ 22,845 ಕೋಟಿ ರೂ. ಕಳೆದುಕೊಂಡ ಭಾರತೀಯರು: ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸೈಬರ್ ವಂಚನೆಯಿಂದಾಗಿ 2024ರಲ್ಲಿ ಭಾರತೀಯರು 22,845.7 ಕೋಟಿ ರೂಪಾಯಿ ನಷ್ಟ ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಮಾಹಿತಿ ನೀಡಿದೆ.
2023ರಲ್ಲಿ ಈ ನಷ್ಟ 7,465.1 ಕೋಟಿ ರೂಪಾಯಿ ಇತ್ತು. ಈ ಬಾರಿ ವಂಚನೆ ಶೇಕಡಾ 206ರಷ್ಟು ಏರಿಕೆಯಾಗಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ಲೋಕಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
2024ರಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್ ನಲ್ಲಿ 22.6 ಲಕ್ಷಕ್ಕೂ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದರು. ಈ ಸಂಖ್ಯೆ 2023ರ 16 ಲಕ್ಷ ಪ್ರಕರಣಗಳಿಗಿಂತ ಶೇಕಡಾ 42ರಷ್ಟು ಹೆಚ್ಚಾಗಿದೆ. 2022ರಲ್ಲಿ ಪೋರ್ಟಲ್ನಲ್ಲಿ 10.3 ಲಕ್ಷ ಪ್ರಕರಣಗಳು ದಾಖಲಾಗಿದ್ದವು.
ವಂಚನೆ ತಡೆಯಲು ಸೈಬರ್ ಅಪರಾಧ ನಿಗ್ರಹಕ್ಕೆ ಕೇಂದ್ರ ಸರ್ಕಾರವು 9.4 ಲಕ್ಷ ಸಿಮ್ ಕಾರ್ಡ್ಗಳು,IMEI ಆಧಾರದಲ್ಲಿ ಪೊಲೀಸರು ದೂರು ದಾಖಲಿಸಿರುವ 2.6 ಲಕ್ಷ ಮೊಬೈಲ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಇದೇ ರೀತಿ I4C (ಇಂಡಿಯನ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್) ಮೂಲಕ ಸೆಪ್ಟೆಂಬರ್ 2024ರಿಂದ ಶಂಕಿತರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಇದರಡಿ 11 ಲಕ್ಷಕ್ಕೂ ಹೆಚ್ಚು ಶಂಕಿತ ಬ್ಯಾಂಕ್ ಖಾತೆಗಳ ಮಾಹಿತಿ ಹಾಗೂ 24 ಲಕ್ಷ 'ಲೇಯರ್ 1 ಮ್ಯೂಲ್ ಖಾತೆಗಳ' ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಮೂಲಕ 4,631 ಕೋಟಿ ರೂಪಾಯಿ ಮೊತ್ತವನ್ನು ವಂಚಕರ ಕೈ ಸೇರದಂತೆ ತಡೆಗಟ್ಟಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಮ್ಯೂಲ್ ಖಾತೆಗಳ ಮೂಲಕ ವಂಚನೆ:
ವಂಚಕರು ಜನರ ಆಧಾರ್ ಹಾಗೂ ಪ್ಯಾನ್ ವಿವರಗಳನ್ನು ಪಡೆದುಕೊಂಡು ಅವರ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ತೆಗೆದುಕೊಂಡಂತೆ ಬಳಸಿ ಹಣ ವರ್ಗಾಯಿಸುತ್ತಾರೆ. ಈ ರೀತಿಯ ಖಾತೆಗಳನ್ನು "ಲೇಯರ್ 1 ಮ್ಯೂಲ್ ಖಾತೆಗಳು" ಎಂದು ಕರೆಯಲಾಗುತ್ತದೆ. ಜನರಿಗೆ ಹಣದ ಆಮಿಷ ನೀಡಿ, ತಮ್ಮ ಖಾತೆ ಉಪಯೋಗಿಸಲು ಒಪ್ಪಿಕೊಳ್ಳುವಂತೆ ಮಾಡಲಾಗುತ್ತದೆ.
ಅಕ್ಟೋಬರ್ನಲ್ಲಿ, ಪ್ರತಿದಿನ ಸರಾಸರಿ 4,000 ಮ್ಯೂಲ್ ಖಾತೆಗಳನ್ನು ಭಾರತದಲ್ಲಿ ಗುರುತಿಸಲಾಗುತ್ತಿತ್ತು ಎಂದು ಗೃಹ ಸಚಿವಾಲಯ ತಿಳಿಸಿತ್ತು.
ಡಿಜಿಟಲ್ ಬಂಧನದ ಮೂಲಕ ವಂಚನೆ:
2022ರಿಂದ 2025ರ ಫೆಬ್ರವರಿವರೆಗೆ “ಡಿಜಿಟಲ್ ಬಂಧನ” ಅಥವಾ ವರ್ಚುವಲ್ ವಿಚಾರಣೆ ವಂಚನೆಗಳಿಂದ 2,576 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಈ ರೀತಿಯ ವಂಚನೆಗಳಲ್ಲಿ ಅಪರಾಧಿಗಳು ಪೊಲೀಸ್ ಅಧಿಕಾರಿಗಳಂತೆ ವೇಷಧರಿಸಿ ವೀಡಿಯೋ ಕರೆ ಮೂಲಕ ಸಂತ್ರಸ್ತರನ್ನು ಬೆದರಿಸಿ ಹಣ ಪಡೆದುಕೊಳ್ಳುತ್ತಾರೆ. ಕೆಲವೊಮ್ಮೆ ಅವರನ್ನು ಮನೆಯೊಳಗೆ ‘ಡಿಜಿಟಲ್ ಬಂಧನ’ ಮಾಡುತ್ತಾರೆ. ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಅದನ್ನು ಮುಕ್ತಾಯ ಮಾಡಲು ಹಣ ಪಾವತಿಸಬೇಕು ಎಂದು ಹೇಳಿ ಬೆದರಿಸಿ ಹಣ ಪಡೆಯುತ್ತಾರೆ. ಈ ಮೂಲಕ ವಂಚಿಸುತ್ತಾರೆ.
ವಿದೇಶಗಳಿಂದ ವಂಚನೆ ಜಾಲಗಳು:
I4C ನ ಮಾಹಿತಿಯ ಪ್ರಕಾರ, ಜನವರಿಯಿಂದ ಏಪ್ರಿಲ್ 2024ರ ವರೆಗೆ ನಡೆದ ಸೈಬರ್ ವಂಚನೆಗಳಲ್ಲಿ ಶೇಕಡಾ 46ರಷ್ಟು ಕಾಂಬೋಡಿಯಾ, ಲಾವೋಸ್ ಮತ್ತು ಮ್ಯಾನ್ಮಾರ್ ಮೂಲದಿಂದ ನಡೆದಿವೆ. Scroll.in ವರದಿಯ ಪ್ರಕಾರ, ಈ ವಂಚನೆ ಕೇಂದ್ರಗಳನ್ನು ಚೀನಾದ ಅಪರಾಧ ಸಿಂಡಿಕೇಟ್ಗಳು ನಡೆಸುತ್ತಿದ್ದು, ಭಾರತೀಯರು ಸೇರಿದಂತೆ ಸಾವಿರಾರು ಮಂದಿ ನಕಲಿ ಉದ್ಯೋಗ ಆಫರ್ಗಳಿಂದ ಆಮಿಷಕ್ಕೆ ಒಳಗಾಗಿ ಈ ಕೇಂದ್ರಗಳಲ್ಲಿ ಬಂಧಿತರಾಗಿದ್ದಾರೆ. ಈ ರೀತಿಯ ವಂಚನೆ ಮಾಡುವುದಿಲ್ಲ ಎಂದು ನಿರಾಕರಿಸಿದ್ದಕ್ಕೆ ಅವರನ್ನು ಥಳಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳೂ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯವು ಕಾಂಬೋಡಿಯಾ ಮತ್ತು ಲಾವೋಸ್ ನಲ್ಲಿ ನಕಲಿ ಉದ್ಯೋಗ ಆಫರ್ಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಸರಕಾರದಿಂದ ಅನುಮೋದಿತ ಏಜೆಂಟ್ಗಳ ಮೂಲಕವೇ ಉದ್ಯೋಗ ಪಡೆಯುವಂತೆ ಸಲಹೆ ನೀಡಿದೆ.
ಕೃಪೆ: scroll.in







