2021ರಿಂದ 38 ಲಕ್ಷಕ್ಕೂ ಅಧಿಕ ಸೈಬರ್ ವಂಚನೆ ದೂರು ದಾಖಲು: ಕೇಂದ್ರ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ : ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಆರಂಭವಾದ 2021 ಹಾಗೂ 2025 ಫೆಬ್ರವರಿ ನಡುವೆ 38 ಲಕ್ಷಕ್ಕೂ ಅಧಿಕ ಸೈಬರ್ ವಂಚನೆ ದೂರುಗಳು ವರದಿಯಾಗಿವೆ ಎಂದು ಕೇಂದ್ರ ಸರಕಾರ ಬುಧವಾರ ತಿಳಿಸಿದೆ.
ಇವುಗಳಲ್ಲಿ ಹೆಚ್ಚಿನ ದೂರುಗಳು ಉತ್ತರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಹಾಗೂ ತೆಲಂಗಾಣದಲ್ಲಿ ದಾಖಲಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯ ಸಂಸತ್ತಿಗೆ ತಿಳಿಸಿದೆ.
ಸೈಬರ್ ವಂಚನೆಗಳಿಂದ 36,448 ಕೋಟಿ ರೂ. ನಷ್ಟವಾಗಿದೆ ಎಂದು ದೂರುದಾರರು ವರದಿ ಮಾಡಿದ್ದಾರೆ. ಹೆಚ್ಚಿನ ನಷ್ಟಗಳು ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಹಾಗೂ ಉತ್ತರಪ್ರದೇಶದಲ್ಲಿ ಉಂಟಾಗಿದೆ.
ಇವುಗಳಲ್ಲಿ 4,380 ಕೋಟಿ ರೂ.ಯನ್ನು ಬ್ಯಾಂಕ್ ಖಾತೆಗಳಲ್ಲಿ ಸ್ತಂಭನಗೊಳಿಸಲಾಗಿದೆ. ಸುಮಾರು 60.5 ಕೋಟಿ ರೂ.ವನ್ನು ಕಳೆದುಕೊಂಡವರಿಗೆ ಹಿಂದಿರುಗಿಸಲಾಗಿದೆ.
ಸೈಬರ್ ವಂಚನೆಗಳನ್ನು ನಿಲ್ಲಿಸಲು ಕೇಂದ್ರ ಸರಕಾರ ತೆಗೆದುಕೊಂಡ ಕ್ರಮಗಳ ಕುರಿತ ಸಂಸದರೊಬ್ಬರ ಪ್ರಶ್ನೆಗಳಿಗೆ ನೀಡಿದ ಪ್ರತಿಕ್ರಿಯೆಯ ಭಾಗವಾಗಿ ಈ ದತ್ತಾಂಶವನ್ನು ಒದಗಿಸಲಾಗಿದೆ.
ಬುಧವಾರ ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಗೃಹ ವ್ಯವಹಾರಗಳ ಸಚಿವಾಲಯ 2022 ಹಾಗೂ 2025 ಫೆಬ್ರವರಿ ನಡುವೆ ಡಿಜಿಟಲ್ ಎರೆಸ್ಟ್ ಹಾಗೂ ಸಂಬಂಧಿತ ಸೈಬರ್ ಅಪರಾಧಗಳಲ್ಲಿ ಭಾರತೀಯರು 2,576 ಕೋಟಿ ರೂ. ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ.
ಈ ಅವಧಿಯಲ್ಲಿ ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ನಲ್ಲಿ ಡಿಜಿಟಲ್ ಎರೆಸ್ಟ್ನ 2.4 ಲಕ್ಷಕ್ಕೂ ಅಧಿಕ ದೂರುಗಳು ದಾಖಲಾಗಿವೆ. 2024ರಲ್ಲಿ ಅತ್ಯಧಿಕ ಸಂಖ್ಯೆಯ ದೂರುಗಳು (1.2 ಲಕ್ಷ) ಹಾಗೂ ನಷ್ಟ( 9,935 ಕೋಟಿ. ರೂ) ದಾಖಲಾಗಿವೆ.
ಡಿಜಿಟಲ್ ಎರೆಸ್ಟ್ನ ಪ್ರಕರಣಗಳಲ್ಲಿ ಕ್ರಿಮಿನಲ್ಗಳು ಸಾಮಾನ್ಯವಾಗಿ ಕಾನೂನು ಜಾರಿ ಅಧಿಕಾರಿಯಂತೆ ನಟಿಸುವ ಮೂಲಕ ವಂಚನೆ ನಡೆಸಿದ್ದಾರೆ. ಆಗಾಗ ಸಮವಸ್ತ್ರ ಧರಿಸಿ ಸರಕಾರಿ ಕಚೇರಿ ಅಥವಾ ಪೊಲೀಸ್ ಠಾಣೆಯಂತೆ ಕಾಣುವ ಸ್ಥಳದಿಂದ ಸಂತ್ರಸ್ತರಿಗೆ ವೀಡಿಯೊ ಕರೆ ಮಾಡಿದ್ದಾರೆ. ಅವರು ಸಂತ್ರಸ್ತರೊಂದಿಗೆ ರಾಜಿ ಮಾಡಿಕೊಳ್ಳಲು ಹಾಗೂ ಪ್ರಕರಣವನ್ನು ಅಂತ್ಯಗೊಳಿಸಲು ಹಣದ ಬೇಡಿಕೆ ಇರಿಸಿದ್ದಾರೆ.
ಕೆಲವು ಪ್ರಕರಣಗಳಲ್ಲಿ ತಮ್ಮ ಬೇಡಿಕೆಗಳು ಈಡೇರುವ ವರೆಗೆ ವ್ಯಕ್ತಿ ಗೋಚರಿಸುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿ ವಂಚಕರು ಸಂತ್ರಸ್ತರನ್ನು ಡಿಜಿಟಲ್ ಅರಸ್ಟ್ ಮಾಡಿದ್ದಾರೆ.
ಅಕ್ಟೋಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೈಬರ್ ವಂಚನೆಯ ವಿಧಾನಗಳ ಕುರಿತು ನಾಗರಿಕರು ಜಾಗೃತರಾಗಬೇಕು ಎಂದು ಎಚ್ಚರಿಕೆ ನೀಡಿದ್ದರು.