2023ರಲ್ಲಿ ಎಸ್ಟಿಗಳ ವಿರುದ್ಧ ಅಪರಾಧಗಳು, ಸೈಬರ್ ವಂಚನೆಗಳು ಹೆಚ್ಚಿದ್ದವು: NCRB ವರದಿ

ಹೊಸದಿಲ್ಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (NCRB) ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ ದೇಶದಲ್ಲಿ 2023ರಲ್ಲಿ ಪರಿಶಿಷ್ಟ ಪಂಗಡಗಳ(ಎಸ್ಟಿ)ಗಳ ವಿರುದ್ಧ ಅಪರಾಧಗಳಲ್ಲಿ ಶೇ.28.8ರಷ್ಟು ಮತ್ತು ಸೈಬರ್ ಅಪರಾಧಗಳಲ್ಲಿ ಶೇ.31.2ರಷ್ಟು ಹೆಚ್ಚಳವಾಗಿತ್ತು.
ದತ್ತಾಂಶಗಳು ವಿಶೇಷವಾಗಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಪರಿಣಾಮದ ಕರಾಳ ಚಿತ್ರಣವನ್ನು ನೀಡಿವೆ. ಮಣಿಪುರವೊಂದರಲ್ಲೇ ಎಸ್ಟಿಗಳ ವಿರುದ್ಧ ಅಪರಾಧದ 3,399 ಪ್ರಕರಣಗಳು ದಾಖಲಾಗಿದ್ದು,2022ರಲ್ಲಿ ದಾಖಲಾಗಿದ್ದ ಕೇವಲ ಒಂದು ಪ್ರಕರಣಕ್ಕೆ ಹೋಲಿಸಿದರೆ ಇದು ದಿಗ್ಭ್ರಮೆಗೊಳಿಸುವ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಮಣಿಪುರದಲ್ಲಿ ನಡೆದಿರುವ ಈ ಘಟನೆಗಳಲ್ಲಿ ಬುಡಕಟ್ಟು ಸಮುದಾಯಗಳನ್ನು ಗುರಿಯಾಗಿಸಿಕೊಂಡು 1051 ಬೆಂಕಿ ಹಚ್ಚಿದ ಪ್ರಕರಣಗಳು, 260 ಡಕಾಯಿತಿ ಪ್ರಕರಣಗಳು ಹಾಗೂ 193 ಬೆದರಿಕೆ ಅಥವಾ ಅಕ್ರಮ ಭೂವಿಲೇವಾರಿ ಪ್ರಕರಣಗಳು ಸೇರಿವೆ ಎಂದು ಎನ್ಸಿಆರ್ಬಿ ವರದಿ ವಿವರಿಸಿದೆ.
ರಾಷ್ಟ್ರಮಟ್ಟದಲ್ಲಿ ದಾಖಲಾದ ಎಸ್ಟಿಗಳ ವಿರುದ್ಧದ ಅಪರಾಧ ಪ್ರಕರಣಗಳ ಒಟ್ಟು ಸಂಖ್ಯೆ ಹಿಂದಿನ ವರ್ಷದ 10,064ರಿಂದ 12,960ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಪರಿಶಿಷ್ಟ ಜಾತಿಗಳ(ಎಸ್ಸಿ) ವಿರುದ್ಧ ಅಪರಾಧ ಪ್ರಕರಣಗಳ ಸಂಖ್ಯೆ 2022ರಲ್ಲಿದ್ದ 57,582ರಿಂದ 2023ರಲ್ಲಿ 57,789ಕ್ಕೆ ಏರಿಕೆಯಾಗಿದ್ದು,ಶೇ.0.4ರಷ್ಟು ಹೆಚ್ಚಳವನ್ನು ತೋರಿಸಿದೆ.
ಈ ನಡುವೆ ಡಿಜಿಟಲ್ ಡೊಮೇನ್ ನಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ವರದಿಯು 2023ರಲ್ಲಿ 86,420 ಸೈಬರ್ ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿದ್ದು 2022ರಲ್ಲಿಯ 65,893ಕ್ಕೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ ಮತ್ತು ಐದು ವರ್ಷಗಳ ಹಿಂದೆ 2018ರಲ್ಲಿಯ 27,248 ಸೈಬರ್ ಅಪರಾಧಗಳಿಗೆ ಹೋಲಿಸಿದರೆ ಮೂರು ಪಟ್ಟಿಗಿಂತ ಹೆಚ್ಚು ಏರಿಕೆಯಾಗಿದೆ.
ಸೈಬರ್ ಅಪರಾಧಗಳಲ್ಲಿ ಆನ್ಲೈನ್ ಹಣಕಾಸು ವಂಚನೆಯು ಮುಖ್ಯಪಾಲು ಹೊಂದಿದೆ. 2023ರಲ್ಲಿ ಒಟ್ಟು ಸೈಬರ್ ಅಪರಾಧಗಳಲ್ಲಿ 59,526 ಘಟನೆಗಳು(ಶೇ.69) ಆನ್ಲೈನ್ ಹಣಕಾಸು ವಂಚನೆಗೆ ಸಂಬಂಧಿಸಿದ್ದವು. ಸುಲಿಗೆ (4,526) ಮತ್ತು ಲೈಂಗಿಕ ಶೋಷಣೆ (4,199 ಪ್ರಕರಣಗಳು)ಗಳೂ ಸೈಬರ್ ಅಪರಾಧಗಳಲ್ಲಿ ಪ್ರಮುಖ ಪಾಲು ಹೊಂದಿದ್ದವು. ಅತ್ಯಂತ ಹೆಚ್ಚಿನ ಸೈಬರ್ ಅಪರಾಧಗಳು ತೆಲಂಗಾಣ(10,303), ಕರ್ನಾಟಕ(8,829) ಮತ್ತು ಉತ್ತರ ಪ್ರದೇಶದಲ್ಲಿ(8,236) ವರದಿಯಾಗಿದ್ದವು.
NCRB ವರದಿಯು ವಿದೇಶಿಯರ ವಿರುದ್ಧದ ಅಪರಾಧಗಳಲ್ಲಿ ಶೇ.24ರಷ್ಟು ಏರಿಕೆಯನ್ನೂ ತೋರಿಸಿದೆ. ದೇಶಾದ್ಯಂತ ಇಂತಹ 238 ಪ್ರಕರಣಗಳು ದಾಖಲಾಗಿದ್ದು,63 ಪ್ರಕರಣಗಳೊಂದಿಗೆ ದಿಲ್ಲಿ ವಿದೇಶಿ ಪ್ರಜೆಗಳಿಗೆ ಅತ್ಯಂತ ಅಸುರಕ್ಷಿತ ಮಹಾನಗರ ಪ್ರದೇಶವಾಗಿತ್ತು.







