ಕಾಂಬೋಡಿಯಾದಲ್ಲಿ ಸೈಬರ್ ಹಗರಣ: 105 ಭಾರತೀಯರ ಬಂಧನ
ಸೈಬರ್ ಅಪರಾಧದ ಜಾಲದಲ್ಲಿದ್ದ ಭಾರೀ ಪ್ರಮಾಣದಲ್ಲಿ ವಿದೇಶಿಯರ ಬಂಧನ

PC : NDTV
ಹೊಸದಿಲ್ಲಿ: ಕಾಂಬೋಡಿಯಾದಲ್ಲಿ ನಡೆದ ಬೃಹತ್ ಸೈಬರ್ ವಂಚಕರ ವಿರುದ್ಧದ ದಾಳಿಯಲ್ಲಿ 105 ಭಾರತೀಯರು ಸೇರಿದಂತೆ 3,000 ಕ್ಕೂ ಹೆಚ್ಚು ಮಂದಿ ವಿದೇಶಿಯರನ್ನು ಬಂಧಿಸಲಾಗಿದೆ. ಕಳೆದ 15 ದಿನಗಳ ಕಾಲ ನಡೆದ ಈ ವಿಶೇಷ ಕಾರ್ಯಾಚರಣೆಯಲ್ಲಿ ಅಲ್ಲಿನ ಪ್ರಾಧಿಕಾರವು 138ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತರ ಪೈಕಿ 3,075 ಮಂದಿಯಲ್ಲಿ ಚೀನಾದ ಪ್ರಜೆಗಳು 1,028 ಮಂದಿ ಇದ್ದಾರೆ. ಉಳಿದಂತೆ ವಿಯೆಟ್ನಾಮ್ (693), ಇಂಡೋನೇಷ್ಯಾ (366) ಹಾಗೂ ಭಾರತ (105) ದೇಶಗಳಿಗೆ ಸೇರಿದವರಾಗಿದ್ದಾರೆ. ಇದೇ ಕಾರ್ಯಾಚರಣೆಯಲ್ಲಿ 606 ಮಹಿಳೆಯರೂ ಬಂಧಿತರಾಗಿದ್ದು, ಪಾಕಿಸ್ತಾನ (81), ಬಾಂಗ್ಲಾದೇಶ (101), ಥೈಲ್ಯಾಂಡ್ (82), ನೇಪಾಳ (13), ಮಲೇಷಿಯಾ (4), ಕೊರಿಯಾ (57), ಫಿಲಿಪೈನ್ಸ್, ನೈಜೀರಿಯಾ, ಉಗಾಂಡಾ, ಲಾವೋಸ್, ಕ್ಯಾಮರೂನ್, ಸಿಯೆರಾ ಲಿಯೋನ್, ರಷ್ಯಾ, ಮ್ಯಾನ್ಮಾರ್ ಹಾಗೂ ಮಂಗೋಲಿಯಾ ದೇಶಗಳ ನಾಗರಿಕರೂ ಸೇರಿದ್ದಾರೆ.
ದಾಳಿಯ ಸಂದರ್ಭ ಹೆಚ್ಚಿನ ಪ್ರಮಾಣದಲ್ಲಿ ಕಂಪ್ಯೂಟರ್ಗಳು, ಲ್ಯಾಪ್ಟಾಪ್ಗಳು, ಮೊಬೈಲ್ ಫೋನ್ಗಳು, ಮಾದಕ ವಸ್ತುಗಳು, ನಕಲಿ ಪೊಲೀಸ್ ಯೂನಿಫಾರ್ಮ್ಗಳು (ಭಾರತೀಯ ಮತ್ತು ಚೀನೀ), ಶಸ್ತ್ರಾಸ್ತ್ರಗಳು, ಬಾಂಬ್ಗಳು ಹಾಗೂ ಎಕ್ಸ್ಟಸಿ ಪೌಡರ್ ಸೇರಿದಂತೆ ಅನೇಕ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ತಿಂಗಳು ಭಾರತ ಮತ್ತು ಕಾಂಬೋಡಿಯಾ ಸರ್ಕಾರಗಳ ನಡುವೆ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ದಾಳಿ ಪ್ರಾರಂಭವಾಗಿದ್ದು, ಭಾರತ ಸೇರಿದಂತೆ ಹಲವು ದೇಶಗಳವರು ಕಾಂಬೋಡಿಯಾದಲ್ಲಿ ಕುಳಿತುಕೊಂಡು ಸೈಬರ್ ವಂಚನೆ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಾಂಬೋಡಿಯಾ ಈಗ ಸೈಬರ್ ಕ್ರೈಂ ಕೇಂದ್ರವಾಗಿ ಬದಲಾಗುತ್ತಿದೆ ಎನ್ನಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
ಪ್ರಕರಣದಲ್ಲಿ ಬಂಧಿತರಾಗಿರುವ ಭಾರತೀಯರನ್ನು ವಾಪಸ್ ಕರೆತರಲು ಭಾರತ ಸರ್ಕಾರವು ಕಾಂಬೋಡಿಯಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಗೃಹ ಸಚಿವಾಲಯವು ಈ ಸಂಬಂಧ ಕ್ರಮ ಕೈಗೊಳ್ಳುತ್ತಿದೆ. ಅಲ್ಲದೆ, ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿರುವ ಭಾರತೀಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.







