ಥಾಣೆ: ಸೈಬರ್ ಕ್ರೈಂ ವಿರುದ್ಧ ಹೋರಾಟ; ‘ಸೈಬರ್ ವಾರಿಯರ್ಸ್’ ನೇಮಕ

ಸಾಂದರ್ಭಿಕ ಚಿತ್ರ
ಥಾಣೆ, ಆ.26: ಸೈಬರ್ ಅಪರಾಧಗಳನ್ನು ಪತ್ತೆಹಚ್ಚಲು ಹಾಗೂ ತಳಮಟ್ಟದಲ್ಲಿ ತಾಂತ್ರಿಕ ಸಾಮರ್ಥ್ಯವನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೆಂಬಂತೆ ಥಾಣೆ ಪೊಲೀಸ್ ಆಯುಕ್ತರು, ಪೊಲೀಸ್ ಠಾಣೆಗಳಲ್ಲಿ ‘ಸೈಬರ್ ವಾರಿಯರ್ಸ್’ಗಳ ತಂಡವನ್ನು ಮಂಗಳವಾರ ನೇಮಿಸಿದ್ದಾರೆ.
ನೂತನ ಉಪಕ್ರಮದಡಿ ರಚನೆಯಾದ ಮೊದಲ ತಂಡದ 72 ಮಂದಿ ಸೈಬರ್ ವಾರಿಯರ್ಸ್ಗೆ ನೇಮಕಾತಿ ಆದೇಶಪತ್ರಗಳನ್ನು ಥಾಣೆ ಪೊಲೀಸ್ ಆಯುಕ್ತ ಅಶುತೋಷ್ ದುಂಬಾರೆ ಅವರು ಹಸ್ತಾಂತರಿಸಿದ್ದಾರೆ.
ಥಾಣೆ ನಗರದಾದ್ಯಂತ ಒಟ್ಟು 150 ಮಂದಿ ಸೈಬರ್ ವಾರಿಯರ್ಸ್ ನೇಮಕಗೊಳ್ಳಲಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿಯವರ ಯುವಪ್ರಶಿಕ್ಷಣ ಯೋಜನೆಯಡಿ ಈ ಸದಸ್ಯರನ್ನು ಆಯ್ಕೆ ಮಾಡಿ ವಿಶೇಷ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ತರಬೇತಿ ನೀಡಲಾಗಿದೆ. ಥಾಣೆ ಪೊಲೀಸ್ ಆಯುಕ್ತರ ಕಾರ್ಯವ್ಯಾಪ್ತಿಯಲ್ಲಿರುವ ವಿವಿಧ ಪೊಲೀಸ್ ಠಾಣೆಗಳಲ್ಲಿರುವ ಸೈಬರ್ ಸೆಲ್ಗಳಲ್ಲಿ ಈ ತಂಡದ ಸದಸ್ಯರನ್ನು ನಿಯೋಜಿಸಲಾಗುವುದು ಎಂದು ಅಶುತೋಷ್ ದುಂಬಾಲೆ ತಿಳಿಸಿದರು.
ಪ್ರತಿಯೊಂದು ಪೊಲೀಸ್ ಠಾಣೆಯು ತಲಾ ನಾಲ್ವರು ಸೈಬರ್ ವಾರಿಯರ್ ಗಳನ್ನು ಹೊಂದಲಿದೆ. ಅವರು ತನಿಖಾಧಿಕಾರಿಗಳಿಗೆ ಅತ್ಯಗತ್ಯವಾದ ಬೆಂಬಲವನ್ನು ಒದಗಿಸಲಿದ್ದಾರೆ ಹಾಗೂ ಸಂಕೀರ್ಣ ಸೈಬರ್ ಕ್ರೈಂ ಪ್ರಕರಣಗಳನ್ನು ಭೇದಿಸಲು ನೆರವಾಗಲಿದ್ದಾರೆಂದು ಪೊಲೀಸ್ ಆಯುಕ್ತರುತಿಳಿಸಿದ್ದಾರೆ. ಈ ತಂಡದ ಸದಸ್ಯರಿಗೆ ಸೈಬರ್ ಸುರಕ್ಷತೆ, ಕೃತಕ ಬುದ್ಧಿಮತ್ತೆ (ಎಐ) ಹಾಗೂ ಡಿಜಿಟಲ್ ಫಾರೆನ್ಸಿಕ್ ನಲ್ಲಿ ತರಬೇತಿ ನೀಡಲಾಗುವುದು.







