ದಿತ್ವಾ ಚಂಡಮಾರುತ | ತಮಿಳುನಾಡಿನಲ್ಲಿ ಭಾರೀ ಮಳೆಗೆ ಮೂವರ ಮೃತ್ಯು; 234 ಗುಡಿಸಲುಗಳಿಗೆ ಹಾನಿ

Image: PTI
ಚೆನ್ನೈ,ನ.30: ತಮಿಳುನಾಡಿನಲ್ಲಿ ದಿತ್ವಾ ಚಂಡಮಾರುತದಿಂದಾಗಿ ಉಂಟಾಗಿರುವ ಮಳೆ ಸಂಬಂಧಿತ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ರಾಜ್ಯದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್ಎಸ್ಆರ್ ರಾಮಚಂದ್ರನ್ ರವಿವಾರ ತಿಳಿಸಿದ್ದಾರೆ.
ರಾಜ್ಯದಲ್ಲಿ ನಾಗಪಟ್ಟಣಂ,ತಿರುವರೂರ್ ಮತ್ತು ಮೈಲಾದುತುರೈ ಸೇರಿದಂತೆ ಸುಮಾರು 56,000 ಹೆಕ್ಟೇರ್ ಕೃಷಿ ಭೂಮಿ ಜಲಾವೃತಗೊಂಡಿದೆ ಎಂದರು.
ದಿವಾ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದ ಸನ್ನದ್ಧತೆಯ ಕುರಿತು ವಿವರಗಳನ್ನು ನೀಡಿದ ಸಚಿವರು, ಪುದುಕೊಟ್ಟೈ, ಮೈಲಾದುತುರೈ,ರಾಮನಾಥಪುರಂ ಸೇರಿದಂತೆ ಪೀಡಿತ ಜಿಲ್ಲೆಗಳಲ್ಲಿ ಒಟ್ಟು 38 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಇವು 2,391 ಜನರಿಗೆ ಆಶ್ರಯ ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿದರು.
‘ಚಂಡಮಾರುತದ ಸ್ವರೂಪ ಏನೇ ಆಗಿರಲಿ,ಅದನ್ನೆದುರಿಸಲು ನಾವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.
ಶನಿವಾರ ಸಂಜೆಯಿಂದ ಭಾರೀ ಮಳೆಯಿಂದಾಗಿ ಮೂವರು ವ್ಯಕ್ತಿಗಳು ಮತ್ತು 149 ಜಾನುವಾರುಗಳು ಮೃತಪಟ್ಟಿದ್ದು, 234 ಗುಡಿಸಲುಗಳಿಗೆ ಹಾನಿಯಾಗಿದೆ. 38 ವಿಪತ್ತು ಪ್ರತಿಕ್ರಿಯಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಮಳೆ ನಿಂತ ಬಳಿಕ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪರಿಹಾರ ಕ್ರಮಗಳನ್ನು ನಿರ್ಧರಿಸಲಿದ್ದಾರೆ ಎಂದರು.
ದಿತ್ವಾ ಚಂಡಮಾರುತವು ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ಉತ್ತರದತ್ತ ಸಾಗುತ್ತಿದ್ದು, ಸ್ಥಿರವಾಗಿ ಸಮುದ್ರ ತೀರಕ್ಕೆ ಹತ್ತಿರವಾಗುತ್ತಿರುವುದರಿಂದ ರವಿವಾರ ಬೆಳಿಗ್ಗೆ ಭಾರತೀಯ ಹವಾಮಾನ ಇಲಾಖೆಯು(ಐಎಂಡಿ) ತಮಿಳುನಾಡು, ಪುದುಚೇರಿ ಮತ್ತು ನೆರೆಯ ದಕ್ಷಿಣ ಆಂಧ್ರಪ್ರದೇಶಗಳಲ್ಲಿ ರೆಡ್ ಅಲರ್ಟ್ ಹೊರಡಿಸಿತ್ತು.
ಚಂಡಮಾರುತವು ಮುಂದಿನ 24 ಗಂಟೆಗಳಲ್ಲಿ ಕರಾವಳಿಗೆ ಸಮಾನಾಂತರವಾಗಿ ನೇರವಾಗಿ ಉತ್ತರ ದಿಕ್ಕಿನತ್ತ ಚಲಿಸುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.







