ನಾಳೆ ಅ.28ರಂದು ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಲಿರುವ ‘ಮೊಂಥಾ’ ಚಂಡಮಾರುತ

ಸಾಂದರ್ಭಿಕ ಚಿತ್ರ | Photo Credit : ANI
ಅಮರಾವತಿ, ಅ. 27: ‘ಮೋಂಥಾ’ ಚಂಡಮಾರುತ ಮಂಗಳವಾರ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಸೋಮವಾರ ತಿಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯು ಭಾರ ಕುಸಿತ ಅಕ್ಟೋಬರ್ 28ರ ಒಳಗೆ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಪ್ರತಿ ಗಂಟೆಗೆ 90 ಕಿ.ಮೀ.ನಿಂದ 110 ಕಿ.ಮೀ. ವರೆಗೂ ವೇಗದ ಗಾಳಿ ಬೀಸಲಿದೆ. ಇದರಿಂದಾಗಿ ಪಶ್ಚಿಮಬಂಗಾಳದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 28 ಹಾಗೂ 31ರ ನಡುವೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.
ಚಂಡಮಾರುತದ ಪ್ರಭಾವ ಆಂಧ್ರಪ್ರದೇಶದಲ್ಲಿ ಈಗಾಗಲೇ ಆರಂಭವಾಗಿದೆ. ಸೋಮವಾರ ಬೆಳಗ್ಗಿನಿಂದ ಮಳೆಯಾಗುತ್ತಿದ್ದು, ಚಂಡಮಾರುತ ಮಚಲಿಪಟ್ಟಣ ಹಾಗೂ ಕಾಕಿನಾಡದ ಸಮೀಪದ ಕಲಿಂಗಪಟ್ನಂನ ನಡುವೆ ಮಂಗಳವಾರ ಸಂಜೆ ಅಥವಾ ರಾತ್ರಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
‘ಮೋಂಥಾ’ ಚಂಡಮಾರುತಕ್ಕೆ ಸಿದ್ಧವಾಗಿರಲು ಪರಿಹಾರ ಹಾಗೂ ಅಗತ್ಯದ ಪೂರೆಗೈಕೆಗೆ ಆಂಧ್ರಪ್ರದೇಶ ಸರಕಾರ ಕ್ರಿಯಾ ಯೋಜನೆ ರೂಪಿಸಿದೆ. ಕರಾವಳಿ ಪ್ರದೇಶದಿಂದ ಜನರನ್ನು ಕೂಡಲೇ ತೆರವುಗೊಳಿಸಿ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಚಂಡಮಾರುತ ನಿರ್ವಹಣೆಯ ವಿಶೇಷ ಅಧಿಕಾರಿ ವಿ. ವಿನಯ್ ಚಂದ್, ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಿಂದ ಜನರು ಜಾನುವಾರುಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ.
ಚಂಡಮಾರುತದ ಹಿನ್ನೆಲೆಯಲ್ಲಿ ಭಾರತೀಯ ಹವಮಾನ ಇಲಾಖೆ ಕರ್ನಾಟಕದ ಉತ್ತರಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಇಲ್ಲಿ ಭಾರೀ ಮಳೆ ಹಾಗೂ ಗಂಟೆಗೆ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಅದು ಹೇಳಿದೆ.
ಬಾಗಲಕೋಟೆ, ಕೊಪ್ಪಳ, ರಾಯಚೂರು, ಬೆಳಗಾವಿ, ಗದಗ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಭಾರೀ ಮಳೆ ಹಾಗೂ ಬೆಂಗಳೂರು, ಶಿವಮೊಗ್ಗ, ಹಾಸನ ಹಾಗೂ ತುಮಕೂರು ಸೇರಿದಂತೆ ಇತರ ಕೆಲವು ಸ್ಥಳಗಳಲ್ಲಿ ಸಾದಾರಣ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.







