ಅ.6ರಿಂದ 'ಶಕ್ತಿ' ಚಂಡಮಾರುತ ದುರ್ಬಲ, ಮುಂಬೈನಲ್ಲಿ ಮಳೆ ಸಾಧ್ಯತೆ

ಸಾಂದರ್ಭಿಕ ಚಿತ್ರ
ಮುಂಬೈ: ಶಕ್ತಿ ಚಂಡಮಾರುತ ಸೋಮವಾರ ಮುಂಜಾನೆಯಿಂದ ನಿಧಾನವಾಗಿ ದುರ್ಬಲವಾಗಲಿದ್ದು, ಪೂರ್ವದತ್ತ ಮುಖ ತಿರುಗಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.
ಭಾನುವಾರದಮಟ್ಟಿಗೆ ಚಂಡಮಾರುತ ಪಶ್ಚಿಮ- ನೈರುತ್ಯ ಮುಖಿಯಾಗಿ ಚಲನೆ ಮುಂದುವರಿಸಲಿದ್ದು, ಪಶ್ಚಿಮ ಕೇಂದ್ರ ಅರಬ್ಬಿ ಸಮುದ್ರ ಪ್ರದೇಶವನ್ನು ಸಂಜೆಯ ವೇಳೆಗೆ ತಲುಪುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿಕೆ ನೀಡಿದೆ.
ಮುಂಗಾರು ಋತುವಿನ ಬಳಿಕದ ಮೊದಲ ಚಂಡಮಾರುತ ಎನಿಸಿದ ಶಕ್ತಿ ಅರಬ್ಬಿಸಮುದ್ರದಲ್ಲಿ ಎದ್ದಿದ್ದು, ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಗಾಳಿ ಶನಿವಾರದಿಂದ ಬೀಸಲಾರಂಭಿಸಿತ್ತು. ಚಂಡಮಾರುತದ ಅವಧಿಯಲ್ಲಿ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದ್ದು, ಮುನ್ನೆಚ್ಚರಿಕೆ ನೀಡಲಾಗಿದೆ.
ಈ ಹಿಂದೆ ಅಂದಾಜಿಸಿದ್ದಂತೆ ಮುಂದಿನ ದಿನಗಳಲ್ಲಿ ಮಳೆಯ ಸಾಧ್ಯತೆ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಶನಿವಾರ ಬಿಡುಗಡೆ ಮಾಡಿದ ಐದು ದಿನಗಳ ಹವಾಮಾನ ಮನ್ಸೂಚನೆಯಲ್ಲಿ, ಅಕ್ಟೋಬರ್ 8ರವರೆಗೆ ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅಲ್ಪ ಹಾಗೂ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದೆ.
ಅಕ್ಟೋಬರ್ 3-5ರವರೆಗೆ 45-55 ಕಿಲೋಮೀಟರ್ ವೇಗದಲ್ಲಿ ಉತ್ತರ ಮಹಾರಾಷ್ಟ್ರ ಕರಾವಳಿ ತೀರದಲ್ಲಿ ಗಾಳಿ ಬೀಸಲಿದೆ. ಚಂಡಮಾರುತದ ತೀವ್ರತೆಯ್ನು ಹೊಂದಿಕೊಂಡು ಗಾಳಿಯವೇಗ ಬದಲಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚಂಡಮಾರುತದ ಕಾರಣದಿಂದ ಸಮುದ್ರದಲ್ಲಿ ಪ್ರಕ್ಷುಬ್ಧತೆ ಕಂಡುಬರುವ ಸಾಧ್ಯತೆಯಿದ್ದು, ಮಹಾರಾಷ್ಟ್ರದ ಒಳನಾಡು ಪ್ರದೇಶದ ಕೆಲವೆಡೆ ಚದುರಿದಂತೆ ಮಳೆಯಾಗಲಿದೆ.







