ಫ್ರಾನ್ಸ್ ನಿಂದ 26 ರಫೇಲ್ ಜೆಟ್ ಗಳ ಖರೀದಿಗೆ ಡಿಎಸಿ ಅಸ್ತು

Photo : PTI
ಹೊಸದಿಲ್ಲಿ: ಸಾಗರ ಯುದ್ಧಕ್ಕಾಗಿ ನೌಕಾಪಡೆಗೆ ಬೇಕಾದ ಸಮರ ಜೆಟ್ ಗಳ ಖರೀದಿನಗೆ ರಕ್ಷಣಾ ಖರೀದಿ ಮಂಡಳಿ(ಡಿಎಸಿ)ಯು ಗುರುವಾರ ಅನುಮೋದನೆ ನೀಡಿದೆ. ಫ್ರೆಂಚ್ ಮೂಲದ ಸೇನಾ ಉಪಕರಣಗಳ ಉತ್ಪಾದಕರ ಜಂಟಿ ಸಹಭಾಗಿತ್ವದಲ್ಲಿ ಮೂರು ನೂತನ ಜಲಾಂತರ್ಗಾಮಿ ನೌಕೆಗಳ ನಿರ್ಮಾಣದ ಪ್ರಸ್ತಾವನೆಗೂ ಮಂಡಳಿಯು ಹಸಿರುನಿಶಾನೆ ತೋರಿಸಿದೆ.
‘‘26 ರಫೇಲ್-ಎಂ ಸಮರ ಫೈಟರ್ ಜೆಟ್ ನ ಖರೀದಿ ಹಾಗೂ ಭಾರತದಲ್ಲಿ ಮೂರು ನೂತನ ಜಲಾಂತರ್ಗಾಮಿ ನೌಕೆಗಳ ಉತ್ಪಾದನೆ ಸೇರಿದಂತೆ ಎರಡು ಪ್ರಸ್ತಾವಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಡಿಎಸಿ ಅನುಮೋದನೆ ನೀಡಿದೆ’’ ಎಂದು ಮೂಲಗಳು ತಿಳಿಸಿವೆ.
ಡಿಎಸಿಯ ಈ ನಡೆಯು, ಸಮುದ್ರಪ್ರದೇಶದ ಮೇಲಿನ ವಾಯು ಸಮರದಲ್ಲಿ ದೇಶದ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಜೊತೆಗೆ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ನಿರ್ಮಾಣದಿಂದಾಗಿ ಸಾಗರದಾಳದ ಕಾಳಗದಲ್ಲಿ ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ವೃದ್ಧಿಸಲಿದೆ ಎಂದು ಮೂಲಗಳು ತಿಳಿಸಿವೆ.
ಜುಲೈ 14-16ರಂದು ಪ್ರಧಾನಿ ನರೇಂದ್ರ ಮೋದಿಯವರ ಫ್ರಾನ್ಸ್ ಗೆ ಭೇಟಿ ನೀಡಲಿದ್ದು, ಆಗ ಆ ದೇಶದಿಂದ 26 ರಫೇಲ್ ಎಂ ಜೆಟ್ ಗಳ ಹಾಗೂ ಮೂರು ಹೆಚ್ಚುವರಿ ಸ್ಕಾರ್ಪಿಯನ್ ಜಲಾಂತರ್ಗಾಮಿಗಳನ್ನು ಖರೀದಿಸುವ ಒಪ್ಪಂದವನ್ನು ಘೋಷಿಸುವ ನಿರೀಕ್ಷೆಯಿದೆ.
ಈ ಒಪ್ಪಂದದ ಒಟ್ಟು ವೌಲ್ಯ ಸುಮಾರು 90 ಸಾವಿರ ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಭಾರತವು ಫ್ರಾನ್ಸ್ ನಿಂದ ಖರೀದಿಸುವ 26 ರಫೇಲ್ ನಮರ ಜೆಟ್ ಗಳಲ್ಲಿ, 22 ಏಕ ಆಸನದ ಹಾಗೂ ನಾಲ್ಕು ಅವಳಿ ಆಸನದ ಟ್ರೈನರ್ ಜೆಟ್ಗಳನ್ನು ಒಳಗೊಂಡಿವೆ. ಈ ಮೊದಲು ರಾಷ್ಟ್ರೀಯ ಆಂಗ್ಲ ದೈನಿಕವೊಂದು ವರದಿ ಮಾಡಿದಂತೆ, ಭಾರತೀಯ ನೌಕಾಪಡೆಯು, ಅಮೆರಿಕದ ಎಫ್-18 ಸೂಪರ್ ಹಾರ್ನೆಟ್ ಫೈಟರ್ ಜೆಟ್ನ ಬದಲಿಗೆ ಫ್ರಾನ್ಸ್ನ ಮೆರೈನ್ ಫೈಟರ್ ವಿಮಾನವಾದ ರಫೇಲ್ ಎಂ ಫೈಟರ್ ವಿಮಾನಗಳ ಖರೀದಿಗೆ ಆದ್ಯತೆಯನ್ನು ನೀಡಿದೆ ಎನ್ನಲಾಗಿದೆ.







