ತನ್ನ ಉತ್ತರಾಧಿಕಾರಿಯನ್ನು ಸ್ವತಃ ದಲಾಯಿ ಲಾಮಾ ನಿರ್ಧರಿಸಬೇಕು: ಭಾರತ

ದಲಾಯಿ ಲಾಮಾ | PC : PTI
ಹೊಸದಿಲ್ಲಿ: ಟಿಬೆಟ್ ನ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾರ ಉತ್ತರಾಧಿಕಾರಿಯನ್ನು ಸ್ವತಃ ದಲಾಯಿ ಲಾಮಾರೇ ನಿರ್ಧರಿಸಬೇಕು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಗುರುವಾರ ಹೇಳಿದ್ದಾರೆ.
ದಲಾಯಿ ಲಾಮಾರ ಉತ್ತರಾಧಿಕಾರಿಗೆ ತನ್ನ ಅನುಮೋದನೆ ಬೇಕು ಎಂದು ಚೀನಾ ಹೇಳಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ಟಿಬೆಟ್ ಬೌದ್ಧರ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾರ 600 ವರ್ಷಗಳ ಪರಂಪರೆಯು ತನ್ನ ಸಾವಿನ ಬಳಿಕವೂ ಮುಂದುವರಿಯುತ್ತದೆ ಎಂಬುದಾಗಿ ದಲಾಯಿ ಲಾಮಾ ಬುಧವಾರ ಹೇಳಿದ್ದರು. ಅದಕ್ಕೆ ಚೀನಾ ಈ ರೀತಿಯಾಗಿ ಪ್ರತಿಕ್ರಿಯಿಸಿತ್ತು.
ನಾನು ರಚಿಸಿರುವ ಟ್ರಸ್ಟ್ ಗೆ ಮಾತ್ರ ನನ್ನ ಸಾವಿನ ನಂತರ ನನ್ನ ಪುನರ್ಜನ್ಮವನ್ನು ಗುರುತಿಸುವ ಅಧಿಕಾರವಿದೆ ಎಂದು ದಲಾಯಿ ಲಾಮಾ ಹೇಳಿದ್ದಾರೆ. ಆ ಮೂಲಕ, ತನ್ನ ಉತ್ತರಾಧಿಕಾರಿಯನ್ನು ಆರಿಸುವ ಯಾವುದೇ ಅವಕಾಶವನ್ನು ಚೀನಾಗೆ ನಿರಾಕರಿಸಿದ್ದಾರೆ.
ದಲಾಯಿ ಲಾಮಾ ಹುದ್ದೆಯು ಟಿಬೆಟ್ನಲ್ಲಿರುವ ಟಿಬೆಟಿಗರಿಗೆ ಮಾತ್ರವಲ್ಲ, ಜಗತ್ತಿನಾದ್ಯಂತದ ಟಿಬೆಟಿಗರಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ರಿಜಿಜು ಹೇಳಿದರು. ‘‘ದಲಾಯಿ ಲಾಮಾರ ಪುನರವತಾರವನ್ನು ಸ್ವತಃ ದಲಾಯಿ ಲಾಮಾರ ಇಚ್ಛೆಯಂತೆ ಸ್ಥಾಪಿತ ಸಂಪ್ರದಾಯದ ಮೂಲಕ ನಿರ್ಧರಿಸಬೇಕಾಗಿದೆ. ಚಾಲ್ತಿಯಲ್ಲಿರುವ ಸಂಪ್ರದಾಯ ಮತ್ತು ಅವರನ್ನು ಹೊರತುಪಡಿಸಿ ಅವರ ಉತ್ತರಾಧಿಕಾರಿಯನ್ನು ನಿರ್ಧರಿಸುವ ಹಕ್ಕು ಇತರ ಯಾರಿಗೂ ಇಲ್ಲ’’ ಎಂದು ರಿಜಿಜು ಹೇಳಿದರು.
ಬೌದ್ಧರಾಗಿರುವ ರಿಜಿಜು ಮತ್ತು ಅವರ ಸಚಿವ ಸಂಪುಟ ಸಹೋದ್ಯೋಗಿ ರಾಜೀವ್ ರಂಜನ್ ಸಿಂಗ್ ಜಲೈ 6ರಂದು ಧರ್ಮಶಾಲೆಯಲ್ಲಿ ನಡೆಯಲಿರುವ ದಲಾಯಿ ಲಾಮಾರ 90ನೇ ಹುಟ್ಟುಹಬ್ಬ ಆಚರಣೆಯಲ್ಲಿ ಭಾರತ ಸರಕಾರವನ್ನು ಪ್ರತಿನಿಧಿಸಲಿದ್ದಾರೆ.
ದಲಾಯಿ ಲಾಮಾ ಹುದ್ದೆಯು ಮುಂದುವರಿಯಬೇಕೇ ಬೇಡವೇ ಎನ್ನುವುದನ್ನು ನನ್ನ 90ನೇ ಹುಟ್ಟುಹಬ್ಬದ ದಿನ ನಿರ್ಧರಿಸುವುದಾಗಿ ದಲಾಯಿ ಲಾಮಾ 2011ರಲ್ಲಿ ಹೇಳಿದ್ದರು.







