ಉತ್ತರ ಪ್ರದೇಶ | ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಸೋತ ದಲಿತ ಬಾಲಕನ ಮೇಲೆ 7 ಮಂದಿ ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ

ಸಾಂದರ್ಭಿಕ ಚಿತ್ರ
ಮೀರತ್: ಕ್ರಿಕೆಟ್ ಪಂದ್ಯವೊಂದರಲ್ಲಿ 50 ರೂ. ಬೆಟ್ಟಿಂಗ್ ಸೋತ ನಂತರ ಹಣ ಪಾವತಿಸಲು ವಿಫಲನಾದ 16 ವರ್ಷದ ದಲಿತ ಬಾಲಕನ ಮೇಲೆ ಏಳು ಅಪ್ರಾಪ್ತರು ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ.
ಅಪರಾಧಿಗಳು ಲೈಂಗಿಕ ದೌರ್ಜನ್ಯದ ಬಳಿಕ ವೀಡಿಯೊವನ್ನು ರೆಕಾರ್ಡ್ ಮಾಡಿ ಗೆಳೆಯರಿಗೆ ಹಂಚಿಕೊಂಡಿದ್ದಾರೆ. ಬಳಿಕ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಬಾಲಕನ ಮೇಲೆ ಹಲವಾರು ಬಾರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಒಂದು ತಿಂಗಳ ಹಿಂದೆ ಘಟನೆ ನಡೆದಿದೆ. ಬಾಲಕ ಈ ಬಗ್ಗೆ ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ ಬಳಿಕ ಸೋಮವಾರ ಈ ಕುರಿತು ದೂರು ದಾಖಲಾಗಿದೆ.
ಘಟನೆಯಿಂದ ನನ್ನ ಮಗ ಆಘಾತಕ್ಕೊಳಗಾಗಿದ್ದಾನೆ ಎಂದು ಬಾಲಕನ ತಂದೆ ಹೇಳಿದ್ದಾರೆ.
ʼಬಾಲಕನ ಲೈಂಗಿಕ ದೌರ್ಜನ್ಯ ಎಸಗಿ ಅದರ ವೀಡಿಯೊ ಚಿತ್ರಿಸಲಾಗಿದೆ. ಆ ಬಳಿಕ ವೀಡಿಯೊ ತೋರಿಸಿ ಬೆದರಿಸಿ ನಿರಂತರ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಎಲ್ಲಾ ಆರೋಪಿಗಳು ಅಪ್ರಾಪ್ತ ವಯಸ್ಕರು. ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿ ಆರೋಪಿಗಳ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯ ಸೆಕ್ಷನ್ 3 (2)(5) ಮತ್ತು ಪೋಕ್ಸೊ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ. ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಸಂತ್ರಸ್ತ ಬಾಲಕನ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಕ್ರಿಕೆಟ್ ಪಂದ್ಯದ ಬೆಟ್ಟಿಂಗ್ ವಿವಾದದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆʼ ಎಂದು ಪೊಲೀಸ್ ಅಧಿಕಾರಿ ವೈಭವ್ ಪಾಂಡೆ ಹೇಳಿದ್ದಾರೆ.







