ಉತ್ತರ ಪ್ರದೇಶ | ಕುದುರೆಯಿಂದಿಳಿಯುವಂತೆ ದಲಿತ ವರನಿಗೆ ಕೊಲೆ ಬೆದರಿಕೆ, ವರನ ಅಜ್ಜನ ಮೇಲೂ ಹಲ್ಲೆ: ವರದಿ

ಸಾಂದರ್ಭಿಕ ಚಿತ್ರ (credit: Grok-AI)
ಆಗ್ರಾ: ಕುದುರೆ ಮೇಲೆ ಮದುವೆ ಮೆರವಣಿಗೆ ಹೊರಟ ದಲಿತ ವರನ ಮೇಲೆ ಪಿಸ್ತೂಲಿನ ಹಿಂಭಾಗದಿಂದ ಹೊಡೆದು, ಕುದುರೆಯಿಂದ ಇಳಿದು ಮದುವೆ ಸ್ಥಳಕ್ಕೆ ನಡೆಯುವಂತೆ ಹೇಳಿ, ಕೊಲೆ ಬೆದರಿಕೆ ಹಾಕಿದ ಘಟನೆ ಆಗ್ರಾದಲ್ಲಿ ನಡೆದಿದೆ. ಪ್ರಕರಣದ ಕುರಿತಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಜಾತಿ ನಿಂದನೆಗಳನ್ನು ಮಾಡಿದ್ದು, ಮದುವೆ ಮೆರವಣಿಗೆಯನ್ನು ಬಲವಂತವಾಗಿ ಚದುರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ, ವರ ಕುದುರೆಯಿಂದ ಇಳಿದು ನಡೆಯಲು ಪ್ರಾರಂಭಿಸಿದ್ದು, ದುಷ್ಕರ್ಮಿಗಳ ತಂಡವು ಅವರನ್ನು ಹಿಂಬಾಲಿಸುತ್ತಾ ಬಂದಿತ್ತು ಎಂದು ವರದಿಯಾಗಿದೆ.
22 ವರ್ಷದ ವರ ವಿಶಾಲ್ ನಿಗಮ್ ಅವರ ತಂದೆ ಮುಖೇಶ್ ನಿಗಮ್ ಸಲ್ಲಿಸಿದ ದೂರಿನ ಪ್ರಕಾರ, ಮೆರವಣಿಗೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಗೌತಮ ಬುದ್ಧ ಅವರ ಚಿತ್ರಗಳನ್ನು ಗಮನಿಸಿದ ಆರೋಪಿಗಳು, ದ್ವೇಷ ಸಾಧಿಸಿ ಚಿತ್ರಗಳ ಗಾಜಿನ ಫ್ರೇಮ್ ಗಳನ್ನು ಒಡೆದು ಹಾಕಿದ್ದಾರೆ. ವರನ ಅಜ್ಜ ಜ್ಞಾನ್ ಸಿಂಗ್ (70) ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಮುಖೇಶ್ ನಿಗಮ್ ಆರೋಪಿಸಿದ್ದಾರೆ.
ಈ ಘಟನೆ ಮಾರ್ಚ್ 6 ರಂದು ನಡೆದಿದ್ದರೂ, ವಿಷ್ಣು ಶರ್ಮಾ ಮತ್ತು ಇತರ ಇಬ್ಬರ ವಿರುದ್ಧ ಮಾರ್ಚ್ 10 ರಂದು ಎಫ್ಐಆರ್ ದಾಖಲಿಸಲಾಗಿದೆ.
ವಿಶಾಲ್ ಅವರ ವಿವಾಹ ಮೆರವಣಿಗೆ ಆಗ್ರಾ ಜಿಲ್ಲೆಯ ಮಾಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಧನೋಲಿ ಪಟ್ಟಣದ ಅಜೀಜ್ಪುರ ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾಗ ಆರೋಪಿಗಳು ಅಡ್ಡಗಟ್ಟಿರುವುದಾಗಿ ವರದಿಯಾಗಿದೆ.