ದಲಿತ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಕುಟುಂಬಿಕರ ಅನುಮತಿಯಿಲ್ಲದೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಸ್ಥಳಾಂತರಿಸಿದ ಪೊಲೀಸರು

ವೈ.ಪುರನ್ ಕುಮಾರ್ - Photo : new indian express
ಚಂಡೀಗಢ,ಅ.11: ಆತ್ಮಹತ್ಯೆಗೆ ಶರಣಾದ ದಲಿತ ಐಪಿಎಸ್ ಅಧಿಕಾರಿ ವೈ.ಪುರನ್ ಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿನ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ (ಪಿಜಿಐಎಂಇಆರ್) ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ತಮ್ಮ ಅನುಮತಿಯಿಲ್ಲದೆ ಪುರನ್ ಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅವರ ಕುಟುಂಬಿಕರು ಆಪಾದಿಸಿದ್ದಾರೆ ಹಾಗೂ ಮರಣೋತ್ತರ ಪರೀಕ್ಷೆಗೆ ತಾವು ಅನುಮತಿ ನೀಡಿಲ್ಲವೆಂದು ಹೇಳಿದ್ದಾರೆ.
ಆದಾಗ್ಯೂ ವೈದ್ಯಕೀಯ ಮಂಡಳಿಯು ಇನ್ನೂ ಕೂಡಾ ಮರಣೋತ್ತರ ಪರೀಕ್ಷೆಯನ್ನು ನಡೆಸಿಲ್ಲ ಎಂದು ತಿಳಿದುಬಂದಿದೆ. ಮೃತದೇಹವನ್ನು ಚಂಡೀಗಡದ ಸೆಕ್ಟರ್16ರಲ್ಲಿರುವ ಸರಕಾರಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಇರಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.
‘‘ಚಂಡೀಗಢ ಪೊಲೀಸರು ನಮ್ಮನ್ನು ಕೇಳದೆಯೇ ಮೃತದೇಹವನ್ನು ಸ್ಥಳಾಂತರಿಸಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿಯಾದ ಪುರನ್ ಕುಮಾರ್ ಮೃತಪಟ್ಟು ಐದು ದಿನಗಳೇ ಕಳೆದರೂ ಇನ್ನೂ ನಮಗೆ ನ್ಯಾಯ ದೊರೆತಿಲ್ಲ ’’ ಎಂದು ಅವರ ಭಾವ ಹಾಗೂ ಬಟಿಂಡಾ (ಗ್ರಾಮಾಂತರ)ದ ಆಪ್ ಶಾಸಕ ಅಮಿತ್ ರತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಂಡೀಗಡ ಪೊಲೀಸ್ ಡಿಜಿಪಿ ಸಾಗರ್ ಪ್ರೀತ್ ಹೂಡಾ ಅವರು ಶುಕ್ರವಾರ ಮೃತ ಪುರನ್ ಕುಮಾರ್ ಪತ್ನಿ, ಐಎಎಸ್ ಅಧಿಕಾರಿ ಅಮನೀತ್ ಪಿ. ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಸಾಧ್ಯವಾದಷ್ಟು ಬೇಗನೇ ಮರಣೋತ್ತರ ಪರೀಕ್ಷೆಯನ್ನು ಅನುಮತಿ ನೀಡುವಂತೆ ಅವರು ಕುಟುಂಬಿಕರಿಗೆ ಮನವಿ ಮಾಡಿದರು.
ಪುರನ್ ಕುಮಾರ್ ಅವರ ಕುಟುಂಬವು ಅನುಮತಿ ನೀಡಿದ ಬಳಿಕವಷ್ಟೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಐಪಿಎಸ್ ಅಧಿಕಾರಿ ಪುರನ್ ಕುಮಾರ್ ಅವರು ಬರೆದಿಟ್ಟ ಡೆತ್ ನೋಟ್ ನಲ್ಲಿ ಹೆಸರಿಸಿದ ಎಂಟು ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡುವುದಿಲ್ಲವೆಂದು ಅವರ ಬಂಧುಗಳು ಪಟ್ಟು ಹಿಡಿದಿದ್ದಾರೆ. ಈ ಪೊಲೀಸ್ ಅಧಿಕಾರಿಗಳು ತನಗೆ ಜಾತಿತಾರತಮ್ಯ ಮಾಡಿದ್ದಾರೆ, ಮಾನಸಿಕ ಕಿರುಕುಳ ನೀಡಿದ್ದಾರೆ, ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ ಹಾಗೂ ದೌರ್ಜನ್ಯವೆಸಗಿದ್ದಾರೆ. ಇದರಿಂದ ಬೇಸತ್ತು ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪುರನ್ ಕುಮಾರ್ ಅವರು ಡೆತ್ ನೋಟಿ ನಲ್ಲಿ ಉಲ್ಲೇಖಿಸಿದ್ದರು.
2001ನೇ ಸಾಲಿನ ಐಪಿಎಸ್ ಅಧಿಕಾರಿಯಾದ ಪುರನ್ ಕುಮಾರ್ ಅವರು ಚಂಡೀಗಡದಲ್ಲಿರುವ ಸ್ವಗೃಹದಲ್ಲಿ ತನಗೆ ತಾನೇ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದರು.







