ಮಧ್ಯಪ್ರದೇಶ | ದಲಿತ ಮಹಿಳಾ ಸರಪಂಚ್ಗೆ ಗ್ರಾಮಸಭೆಯಲ್ಲಿ ಕುರ್ಚಿ ನಿರಾಕರಣೆ!
“ನಿಮಗೆ ಕುರ್ಚಿ ಬೇಕಾದರೆ ಮನೆಯಿಂದಲೇ ತನ್ನಿ, ಇಲ್ಲದಿದ್ದರೆ ನೆಲದಲ್ಲಿ ಕುಳಿತುಕೊಳ್ಳಿ” ಎಂದು ಅವಮಾನ

Photo credit: themooknayak.com
ಹೊಸದಿಲ್ಲಿ : ಗ್ರಾಮ ಸಭೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಹಿಳಾ ಸರಪಂಚ್ ಗೆ ಕುಳಿತುಕೊಳ್ಳಲು ಕುರ್ಚಿ ನೀಡಿದೇ ಅವಮಾನ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಆಗಸ್ಟ್ 17ರಂದು ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಅಕೌನಾ ಗ್ರಾಮ ಪಂಚಾಯತ್ನ ವರದಿಯಾಗಿದ್ದು, ಗ್ರಾಮ ಸಭೆಯಲ್ಲಿ ಮಹಿಳಾ ಸರಪಂಚ್ ಶ್ರದ್ಧಾ ಸಿಂಗ್ ಕುಳಿತುಕೊಳ್ಳಲು ಕುರ್ಚಿ ಕೇಳಿದಾಗ, ಉಪ ಸರಪಂಚ್ ಮತ್ತು ಕಾರ್ಯದರ್ಶಿ ಇಬ್ಬರೂ ನಿರಾಕರಿಸಿದರು ಎನ್ನಲಾಗಿದೆ. ನಿಮಗೆ ಕುರ್ಚಿ ಬೇಕಾದರೆ, ಅದನ್ನು ಮನೆಯಿಂದ ತನ್ನಿ; ಇಲ್ಲದಿದ್ದರೆ, ನೆಲದ ಮೇಲೆ ಕುಳಿತುಕೊಳ್ಳಿ ಅಥವಾ ನಿಂತುಕೊಳ್ಳಿ ಎಂದು ಅವಮಾನಿಸಿದರು ಎಂದು ತಿಳಿದು ಬಂದಿದೆ.
ಅಕೌನಾ ಗ್ರಾಮ ಪಂಚಾಯತ್ನ ಠಾಕೂರ್ ಸಮುದಾಯದ ಬಹುಸಂಖ್ಯಾತರಿರುವ ಪ್ರದೇಶದಲ್ಲಿದೆ. ಶ್ರದ್ಧಾ ಸಿಂಗ್ ಅವರು ಇಲ್ಲಿನ ಮೊದಲ ದಲಿತ ಮಹಿಳಾ ಸರಪಂಚರಾಗಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಶ್ರದ್ಧಾ ಅವರನ್ನು ರಾಷ್ಟ್ರಧ್ವಜಾರೋಹಣ ಮಾಡದಂತೆಯೂ ತಡೆಯಲಾಗಿದೆ. ಈ ಕುರಿತು ಅವರು ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಗೆ ಪತ್ರ ಬರೆದು ತಮಗಾದ ಅವಮಾನಗಳನ್ನು ವಿವರಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಗ್ರಾಮ ಪಂಚಾಯಿತ್ ನಲ್ಲಿ ಧ್ವಜಾರೋಹಣವನ್ನು, ರಾಜ್ಯ ಸರ್ಕಾರದ ಆದೇಶದ ಪ್ರಕಾರ ಸರಪಂಚರು ನೆರವೇರಿಸಬೇಕಿತ್ತು. ಆದೇಶದ ಬಗ್ಗೆ ಪಂಚಾಯತ್ ಕಾರ್ಯದರ್ಶಿ ವಿಜಯ್ ಪ್ರತಾಪ್ ಸಿಂಗ್ ಅವರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಅವರು ಸರಪಂಚರು ಪಂಚಾಯತ್ ಆವರಣಕ್ಕೆ ಬರುವಷ್ಟರಲ್ಲಿ ಉಪ ಸರಪಂಚ್ ಧರ್ಮೇಂದ್ರ ಸಿಂಗ್ ಅವರಿಂದ ಧ್ವಜಾರೋಹಣ ಮಾಡಿದ್ದರು ಎಂದು ಹೇಳಿದ್ದಾರೆ.
ಈ ಘಟನೆಯು ಕೇವಲ ಮಹಿಳೆ ಎಂಬ ಕಾರಣಕ್ಕಾಗಿ ಅಲ್ಲ. ಆದರೆ, ಉದ್ದೇಶಪೂರ್ವಕವಾಗಿದೆ. ಏಕೆಂದರೆ, ತಾನು ದಲಿತ ಸಮುದಾಯಕ್ಕೆ ಸೇರಿದವಳು. ಇದು ಅವಮಾನಕ್ಕೆ ಸ್ಪಷ್ಟ ಉದಾಹರಣೆ ಎಂದು ಶ್ರದ್ಧಾ ಸಿಂಗ್ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರದ್ಧಾ ಅವರು ಜುಲೈ 2022 ರಲ್ಲಿ ಗ್ರಾಮದ ಸರಪಂಚ್ ಆಗಿ ಆಯ್ಕೆಯಾದರು. ಗ್ರಾಮದಲ್ಲಿ ಸರಿಸುಮಾರು 1,600 ಮತದಾರರಿದ್ದಾರೆ. ಅವರಲ್ಲಿ ಶೇ.50 ರಷ್ಟು ಜನ ಠಾಕೂರ್ ಸಮುದಾಯದವರು; ಉಳಿದವರು ದಲಿತ, ಆದಿವಾಸಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರು. ಶ್ರದ್ಧಾ ಸಿಂಗ್ ಅವರ ಗೆಲುವಿನ ಅಂತರ ಕೇವಲ 58. ತಮ್ಮ ಗೆಲುವಿನಿಂದ ಕುಪಿತಗೊಂಡಿರುವ ಪ್ರಬಲ ಜಾತಿಯ ಜನರು ಗಲಾಟೆ ಸೃಷ್ಟಿಸಲು ಮತ್ತು ಇತರರನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ ಎಂದು ಶ್ರದ್ಧಾ ಹೇಳಿದರು. ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯ ನಂತರ ಈ ವಿವಾದ ಬೂದಿ ಮುಚ್ಚಿದ ಕೆಂಡಂದಂತಿದೆ.
“ಅವರು ನಡೆಸುತ್ತಿರುವ ವರ್ತನೆಯಿಂದ ತುಂಬಾ ನೋವಾಗಿದೆ. ಆದರೂ ನಾನು ಈ ವಿಚಾರದಲಿ ಬಿಟ್ಟುಕೊಡುವುದಿಲ್ಲ. ಈ ತಾರತಮ್ಯ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇನೆ. ನನ್ನ ಪಂಚಾಯತ್ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಹೋರಾಡುತ್ತೇನೆ” ಎಂದು ಶ್ರದ್ಧಾ ಸಿಂಗ್ ಹೇಳಿದ್ದಾರೆ.







