ಪುಣೆ ಕಾಲೇಜಿನ ಜಾತಿ ತಾರತಮ್ಯದಿಂದ ಇಂಗ್ಲೆಂಡ್ನಲ್ಲಿ ಉದ್ಯೋಗ ಕಳೆದುಕೊಂಡೆ: ದಲಿತ ಯುವಕನಿಂದ ಆರೋಪ

ಪ್ರೇಮ್ ಬಿರ್ಹಾಡೆ (Photo credit: azadmarathi.com)
ಲಂಡನ್ : ಪುಣೆಯಲ್ಲಿ ನಾನು ಅಧ್ಯಯನ ಮಾಡಿದ ಕಾಲೇಜಿನ ಜಾತಿ ತಾರತಮ್ಯದಿಂದ ಇಂಗ್ಲೆಂಡ್ನಲ್ಲಿ ಉದ್ಯೋಗ ಕಳೆದುಕೊಂಡಿದ್ದೇನೆ ಎಂದು ದಲಿತ ಯುವಕನೋರ್ವ ಆರೋಪಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ ದಲಿತ ಯುವಕ ಪ್ರೇಮ್ ಬಿರ್ಹಾಡೆ, ಪುಣೆಯ ಮಾಡರ್ನ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಆಂಡ್ ಕಾಮರ್ಸ್ ಕಾಲೇಜಿನ ಕಾರಣದಿಂದಾಗಿ ನಾನು ನನ್ನ ಕೆಲಸವನ್ನು ಕಳೆದುಕೊಂಡಿದ್ದೇನೆ ಎಂದು ಆರೋಪಿಸಿದ್ದಾರೆ.
ʼಕಂಪೆನಿಯು ನನ್ನ ಕಾಲೇಜಿಗೆ ಸಂಪರ್ಕಿಸಿ ನಾನು ಅಲ್ಲಿ ಓದಿದ್ದೇನೆಯೇ ಎಂದು ಕೇಳಿತ್ತು. ಕಾಲೇಜು ಯಾಕೆ ಪ್ರತಿಕ್ರಿಯಿಸಲಿಲ್ಲ? ಏಕೆಂದರೆ ನಾವು ಜೀವನದಲ್ಲಿ ಮುಂದೆ ಬರುವುದು ಅವರಿಗೆ ಇಷ್ಟವಿಲ್ಲ. ಇದು ನನ್ನ, ನನ್ನ ಕುಟುಂಬದ, ನನ್ನ ಸಮುದಾಯದ ಸಮಸ್ಯೆ ಎಂದು ಹೇಳಿದ್ದಾರೆ.
ಕಾಲೇಜು ಈ ಆರೋಪಗಳನ್ನು ನಿರಾಕರಿಸಿದೆ ಮತ್ತು ಅಕ್ಟೋಬರ್ 14ರಂದು ನೀಡಿದ ಪ್ರಮಾಣಪತ್ರದ ಪ್ರತಿಯನ್ನು ಹಂಚಿಕೊಂಡಿದೆ. ಕಾಲೇಜು ಅಥವಾ ಯಾವುದೇ ಸಿಬ್ಬಂದಿಗಳು ಅವರ ಜಾತಿ ಬಗ್ಗೆ ಚರ್ಚಿಸಿಲ್ಲ. ಎಜ್ಯುಕೇಶನ್ ರೆಫೆರೆನ್ಸ್ ನೀಡದಿರುವುದು ಸಂಸ್ಥೆಯ ನಿಯಮಗಳು ಮತ್ತು ಶಿಸ್ತಿನ ಕಾರಣದಿಂದಾಗಿ ಎಂದು ತಿಳಿಸಿದೆ.
ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ (ವಿಬಿಎ) ಈ ಕುರಿತು ಕಾಲೇಜಿನ ಹೊರಗೆ ಪ್ರತಿಭಟನೆ ನಡೆಸಿದೆ.
ವಿಬಿಎ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಶುಕ್ರವಾರ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಪುಣೆಯ ಮಾಡರ್ನ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಆಂಡ್ ಕಾಮರ್ಸ್ ಕಾಲೇಜು ದಲಿತ ಯುವಕನೋರ್ವನ ಶೈಕ್ಷಣಿಕ ವಿದ್ಯಾರ್ಹತೆಗಳನ್ನು ದೃಢಪಡಿಸಲು ನಿರಾಕರಿಸಿದ್ದರಿಂದ ಲಂಡನ್ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶವನ್ನು ಕಳೆದುಕೊಂಡಿದ್ದಾನೆ ಎಂದು ಆರೋಪಿಸಿದ್ದರು.







