ಫರಿದಾಬಾದ್ | ದಲಿತ ಯುವಕನಿಗೆ ತಲೆ ಬೋಳಿಸಿ ಥಳಿಸಿದ ಆರೋಪ : ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರ ಬಂಧನ
ಜಾತಿ ನಿಂದನೆ ಆರೋಪಿಸಿದ ಕುಟುಂಬ

ಫರಿದಾಬಾದ್ : ದಲಿತ ಸಮುದಾಯಕ್ಕೆ ಸೇರಿದ ಯುವಕನಿಗೆ ಜಾತಿ ನಿಂದನೆಗೈದು ತಲೆ ಬೋಳಿಸಿ ಥಳಿಸಿರುವ ಆರೋಪ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸುಭಾಷ್ ಕಾಲೋನಿ ನಿವಾಸಿ ಸೂರಜ್ ಎಂಬವರು ನೀಡಿದ ದೂರಿನ ಮೇರೆಗೆ ಆದರ್ಶ್ ನಗರ ಪೊಲೀಸರು ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಏನಿದು ಘಟನೆ?
ಸೋಮವಾರ ರಾತ್ರಿ ಸಾಹಿಲ್ ರಕ್ತಸ್ರಾವದೊಂದಿಗೆ ಫರಿದಾಬಾದ್‌ನ ಬಲ್ಲಭಗಢದ ಸುಭಾಷ್ ಕಾಲೋನಿಯಲ್ಲಿರುವ ತನ್ನ ನಿವಾಸಕ್ಕೆ ತೆರಳಿದ್ದಾನೆ. ಈ ವೇಳೆ ಅವನಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಆತನ ತಲೆ ಬೋಳಿಸಲಾಗಿತ್ತು. ಗಡ್ಡವನ್ನು ಕತ್ತರಿಸಲಾಗಿತ್ತು. ಆಘಾತಕ್ಕೊಳಗಾಗಿದ್ದರಿಂದ ಅವನಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಆತನ ಸ್ಥಿತಿ ಕಂಡು 13ರ ಹರೆಯದ ಸಹೋದರಿ ಮೂರ್ಛೆ ಹೋದಳು. ಮನೆಯ ಬಳಿ ಜನ ಜಮಾಯಿಸಿದರು.
ಆತನನ್ನು ಸಮಾಧಾನವಾಗಿ ವಿಚಾರಿಸಿದ ಬಳಿಕ ತನ್ನ ಮೇಲೆ ಗೆಳೆಯರು ದೌರ್ಜನ್ಯ ನಡೆಸಿರುವ ಬಗ್ಗೆ ಸಾಹಿಲ್ ಹೇಳಿದ್ದಾನೆ. ಈ ಕುರಿತು ಸಾಹಿಲ್ ಸಂಬಂಧಿ ಸೂರಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಫರಿದಾಬಾದ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಹಲ್ಲೆಯಲ್ಲಿ ಭಾಗಿಯಾಗಿರುವ ಮತ್ತೋರ್ವ ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ʼಆರೋಪಿಗಳು ಸಾಹಿಲ್‌ಗೆ ಜಾತಿ ನಿಂದನೆ ಮಾಡಿದ್ದಾರೆ. ನಾಲ್ವರು ಆರೋಪಿಗಳು ಸಾಹಿಲ್‌ನ್ನು ಒತ್ತೆಯಾಳಾಗಿ ಇರಿಸಿಕೊಂಡು ಕೂದಲು, ಮೀಸೆ ಮತ್ತು ಗಡ್ಡವನ್ನು ಕತ್ತರಿಸಿ, ತಲೆಕೆಳಗಾಗಿಸಿ ಕೋಲುಗಳು ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆʼ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆರೋಪಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಇತರ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.







